ಬೆಂಗಳೂರು : ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ವಿಚಾರ ಮತ್ತೆ ಸದ್ದು ಮಾಡುತ್ತಿದ್ದು, ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷರ ಡಿ.ಕೆ.ಶಿವಕುಮಾರ್ ಆರೋಪ ಸತ್ಯ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಫೋನ್ ಟ್ಯಾಪಿಂಗ್ ಆರೋಪವಲ್ಲ, ಅದು ಸತ್ಯ. ಕಳೆದ 15 ದಿನಗಳಿಂದ ಫೋನ್ ನಲ್ಲಿ ಮಾತನಾಡುವಾಗ ಡಿಸ್ಟರ್ಬೆನ್ಸ್ ಆಗುತ್ತಿದೆ. ಕೆಲವರು ದೂರು ಕೊಡುವಂತೆ ಹೇಳಿದ್ದರು. ಹೀಗಾಗಿ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೇ ಬಿಜೆಪಿಯವರು ಫೋನ್ ಕದ್ದಾಲಿಕೆಯಲ್ಲಿ ಎಕ್ಸ್ ಪರ್ಟ್ ಎಂದು ಆರೋಪಿಸಿದ ಸುರೇಶ್, ಒಂದು ಪಕ್ಷದ ಅಧ್ಯಕ್ಷರು ಈ ಕುರಿತು ಗಂಭೀರವಾಗಿ ಆರೋಪ ಮಾಡಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹಗರಣ ಮಾಡೋಕೆ ಅವಕಾಶವಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಗೃಹ ಸಚಿವರು ಲಘುವಾಗಿ ಮಾತನಾಡಬಾರದು ಎಂದು ಒತ್ತಾಯಿಸಿದ್ದಾರೆ.
ಮುಂದುವರಿದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು, ಡಿಜೆ ಹಳ್ಳಿ ಪ್ರಕರಣಕ್ಕೂ ಟ್ಯಾಪಿಂಗ್ ಗೂ ಸಂಬಂಧವಿಲ್ಲ. ಡಿಜೆ ಹಳ್ಳಿ ಪ್ರಕರಣ ಮುಚ್ಚಿಹಾಕೋಕೆ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ವಾಸ್ತವಾಂಶವೇ ಬೇರೆ ಇದೆ. ಬಿಬಿಎಂಪಿ ಚುನಾವಣೆಗಳು ಬರುತ್ತಿವೆ. ಹೀಗಾಗಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಇದಕ್ಕಾಗಿ ಪೊಲೀಸರ ಮೇಲೆ ಒತ್ತಡ ತರುತ್ತಿದ್ದಾರೆ. ಸಾವಿನ ಮೇಲೆ ಹೆಣದ ರಾಜಕೀಯ ಮಾಡಿದರು. ಈಗ ಈ ಪ್ರಕರಣವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.









