ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿದು ಸುದೀರ್ಘ ಅವಧಿಯನ್ನು ಪೂರೈಸುವ ಮೂಲಕ ದೇವರಾಜ್ ಅರಸು ಅವರ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆದರೆ, ಈ ಸಂಭ್ರಮದ ನಡುವೆಯೇ ವಿರೋಧ ಪಕ್ಷವಾದ ಬಿಜೆಪಿ, ಮುಖ್ಯಮಂತ್ರಿಗಳ ವಿರುದ್ಧ ವ್ಯಂಗ್ಯಭರಿತ ಅಭಿಯಾನವೊಂದನ್ನು ಆರಂಭಿಸಿದ್ದು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಬಿಡುಗಡೆ ಮಾಡಿರುವ ಸಾಧನಾ ಪಟ್ಟಿ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ದಾಖಲೆಯ ಸರದಾರನಾದ ಸಿದ್ದರಾಮಯ್ಯ
ಜನವರಿ 6, 2026ರ ದಿನಾಂಕದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಟ್ಟು 7 ವರ್ಷ 240 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಅವಧಿ ಸಿಎಂ ಆದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಕುರಿತು ತಮ್ಮ ಭಾವನೆಗಳನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ಇಷ್ಟು ವರ್ಷಗಳ ರಾಜಕೀಯ ಜೀವನ ತಮಗೆ ತೃಪ್ತಿ ತಂದಿದೆ ಎಂದಿದ್ದಾರೆ. ರಾಜಕಾರಣ ಎಂದರೆ ಬಡವರು, ದಲಿತರು ಮತ್ತು ಹಿಂದುಳಿದವರ ಪರವಾಗಿ ಕೆಲಸ ಮಾಡುವುದು. ಕೇವಲ ಶಾಸಕನಾಗಬೇಕೆಂಬ ಕನಸು ಕಂಡಿದ್ದೆ, ಆದರೆ ಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನಾಗಿ ಮತ್ತು ಈಗ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಹೇಳಿಕೊಂಡಿದ್ದಾರೆ.
ಕುಂಟುತ್ತಾ ತೆವಳುತ್ತಾ ದಾಖಲೆ ಬರೆದಿರಿ: ಛಲವಾದಿ ವ್ಯಂಗ್ಯ
ಮುಖ್ಯಮಂತ್ರಿಗಳ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ, ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಮಾನ್ಯ ಮುಖ್ಯಮಂತ್ರಿಗಳೇ, ಕೊನೆಗೂ ಕುಂಟುತ್ತಾ, ತೆವಳುತ್ತಾ, ರಾಜೀನಾಮೆ ನೀಡುವ ಭಯದಲ್ಲಿಯೇ ತಾವು ಅತಿ ಹೆಚ್ಚು ವರ್ಷಗಳ ಕಾಲ ಸಿಎಂ ಆದ ದಾಖಲೆಗೆ ಪಾತ್ರರಾಗಿದ್ದೀರಿ. ಹೀಗಾಗಿ ನಿಮಗೆ ನಮ್ಮ ಅಭಿನಂದನೆಗಳು ಎಂದು ಚುಚ್ಚಿದ್ದಾರೆ.
ಅಲ್ಲದೆ, ಸಿದ್ದರಾಮಯ್ಯನವರ ಹೆಸರಿನ ಸಿದ್ದು ಪದವನ್ನೇ ಬಳಸಿ ಪ್ರಾಸಬದ್ಧವಾಗಿ ಬರೆದಿರುವ ಆರೋಪಗಳ ಪಟ್ಟಿಯನ್ನು ಅವರು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಬರಗಾಲ ನಿರ್ವಹಣೆ, ಮತ್ತು ಹಿಂದುತ್ವದ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕ ಪಟ್ಟಿ ಮಾಡಿದ ಸಿದ್ದು ಸಾಧನೆಗಳು ಇವು:
ಸಿಎಂ ಆದ ಕೆಲವು ದಿನಗಳಲ್ಲಿಯೇ ಮತಾಂಧ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ನಿರ್ಧರಿಸಿದ್ದು!!
ಸಿಎಂ ಆದ ಕೆಲವು ದಿನಗಳಲ್ಲಿಯೇ ಕರ್ನಾಟಕಕ್ಕೆ ಕಂಡು ಕೇಳರಿಯದಂತಹ ಬರಗಾಲ ಆವರಿಸಿದ್ದು!!
ಸಮರ್ಥವಾಗಿದ್ದ ಲೋಕಾಯುಕ್ತಕ್ಕೆ ಮೊಳೆ ಹೊಡೆದು ದುರ್ಬಲ ಎಸಿಬಿ ಸ್ಥಾಪಿಸಿದ್ದು!!
ದಕ್ಷ ಹಿರಿಯ ಅಧಿಕಾರಿಗಳಿಗೆ ಸಾವಿನ ಭಾಗ್ಯ ಕರುಣಿಸಿದ್ದು!!
ಅತಿಯಾದ ಓಲೈಕೆ ರಾಜಕಾರಣಕ್ಕೆ ಕುಮ್ಮಕ್ಕು ನೀಡಿಸಿದ್ದು!!
ಮಹಾದಾಯಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿಸಿದ್ದು!!
ರಾಜ್ಯದಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಿಸಿದ್ದು!!
ಸಿಎಂ ಆದ ಮೊದಲ ಅವಧಿಯಲ್ಲಿ ಕರ್ನಾಟಕದ 4257 ರೈತರಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದ್ದು!!
ವೀರಶೈವ-ಲಿಂಗಾಯತ ಎಂದು ಸಮುದಾಯದೊಳಗೆ ಬೆಂಕಿ ಹಚ್ಚಿಸಿದ್ದು!!
ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿಸಿದ್ದು!!
ಸಮಾಜವಾದಿ ಎಂದು ಹೇಳಿ ದುಬಾರಿ ಹ್ಯುಬ್ಲೋಟ್ ವಾಚ್ ಧರಿಸಿದ್ದು!!
ಗೌಡ-ಲಿಂಗಾಯತ-ಬ್ರಾಹ್ಮಣ(ಜಿಲೇಬಿ)ಫೈಲುಗಳನ್ನು ದೂರವಿರಿಸಿದ್ದು!!
ಅರ್ಕಾವತಿ ಲೇಔಟ್ ನ ರೀ-ಡೂ ಹಗರಣ ಮಾಡಿಸಿದ್ದು!!
ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನ ಮಾಡಿಸಿದ್ದು!!
ಅತಿ ಹೆಚ್ಚು ಸಾಲ ಮಾಡಿ ಕರ್ನಾಟವನ್ನು ದಿವಾಳಿ ಮಾಡಿಸಿದ್ದು!!
ಮುಡಾದಲ್ಲಿ ಅಕ್ರಮವಾಗಿ 14 ಸೈಟು ಕಬಳಿಸಿದ್ದು!!
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿಯನ್ನು ಎಗರಿಸಿದ್ದು!!
ಕಾವೇರಿಯನ್ನು ಸ್ಟಾಲಿನ್ ನಾಡಿಗೆ ಹರಿಸಿದ್ದು!!
ಕನ್ನಡಿಗರನ್ನು ಕಡೆಗಣಿಸಿ ವಯನಾಡಿಗೆ ಮನೆ ಹಂಚಿಸಿದ್ದು!!
ತಮ್ಮ ವೈಫಲ್ಯಗಳಿಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದು!!
ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿಸಿದ್ದು!!
ಭಯೋತ್ಪಾದಕರಿಗೆ ಅಮಯಾಕ ಪಟ್ಟ ಕಟ್ಟಲು ಪೂರಕ ವಾತಾವರಣ ಕಲ್ಪಿಸಿದ್ದು!!
ಮತಾಂಧ ಔರಂಗಜೇಬನ ಕಟೌಟ್ ಹಾಕಲು ಪ್ರೇರೆಪಿಸಿದ್ದು!!
ದಲಿತರ ಪಾಲಿನ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಹಣವನ್ನು ದುರ್ಬಳಕೆ ಮಾಡಿಸಿದ್ದು!!
ಮಕ್ಕಳಿಗೆ ಹುಳುಯುಕ್ತ ಊಟವನ್ನು ಹಾಕಿಸಿದ್ದು!!
ಪಂಚಮಸಾಲಿಗಳ ಮೇಲೆ ಲಾಠಿಚಾರ್ಜ್ ಮಾಡಿಸಿದ್ದು!!
ಬರ ಹಾಗೂ ನೆರೆ ನಿರಾಶ್ರಿತರಿಗೆ ಪರಿಹಾರ ನೀಡದೆ ವಂಚಿಸಿದ್ದು!!
ಕಾರ್ಮಿಕರಿಗೆ ನೀಡುವ ಕಿಟ್ ನಲ್ಲಿ ಹಗರಣ ಮಾಡಿಸಿದ್ದು!!
ಬಡವರಿಗೆ ಹಂಚುವ ಮನೆಗೆ ಲಂಚ ಕೇಳಿಸಿದ್ದು!!
SDPI/PFI ಮತಾಂಧರ ಕೇಸ್ ವಜಾ ಮಾಡಿಸಿದ್ದು!!
ಗುತ್ತಿಗೆದಾರರ ಬಳಿ 60 ಪರ್ಸೆಂಟ್ ಕಮಿಷನ್ ಗೆ ಕೈ ಚಾಚಿಸಿದ್ದು!!
ವಕ್ಫ್ ಹೆಸರಿನಲ್ಲಿ ರೈತರ ಭೂಮಿ ಕಬಳಿಕೆಗೆ ಸ್ಕೆಚ್ ಹಾಕಿಸಿದ್ದು!!
ಅಬಕಾರಿ ಲೈಸೆನ್ಸ್ ನವೀಕರಣದ ಹೆಸರಿನಲ್ಲಿ ಲಂಚಾವತಾರ ಸ್ಥಾಪಿಸಿದ್ದು!!
ಗೃಹಲಕ್ಷ್ಮಿ ಹಣವನ್ನು ಎಗರಿಸಿದ್ದು!!
ಎಲ್ಲಾ ವಸ್ತುಗಳ ಬೆಲೆಯೇರಿಕೆ ಮಾಡಿಸಿದ್ದು!!
ರೈತರ ಬೋರ್ವೆಲ್‌ಗಳ ಟಿಸಿ ಶುಲ್ಕ ಏರಿಸಿದ್ದು!!
ಜನೌಷಧಿ ಕೇಂದ್ರಗಳನ್ನು ಮುಚ್ಚಲು ಷಡ್ಯಂತ್ರ ರೂಪಿಸಿದ್ದು!!
ಸ್ಮಾರ್ಟ್ ಮೀಟರ್ ಹಗರಣದ ಮೂಲಕ ಜನರನ್ನು ದೋಚಲು ಯತ್ನಿಸಿದ್ದು!!
ಗಂಧದ ನಾಡಾಗಿದ್ದ ಕರ್ನಾಟಕವನ್ನು ನಶೆಯ ನಾಡನ್ನಾಗಿಸಿದ್ದು!!
ದಸರಾ ಕಲಾವಿದರ ಬಳಿ ಮಾಮೂಲು ಕೇಳಿಸಿದ್ದು!!
ಹಿಂದೂ ದೇವಾಲಯಗಳ ಹುಂಡಿ ಕಾಸನ್ನು ಎಗರಿಸಿದ್ದು!!
ಸಾರಿಗೆ ಇಲಾಖೆಗೆ ಡಕೋಟಾ ಬಸ್ಸುಗಳನ್ನು ಕರುಣಿಸಿದ್ದು!!
ಕೊಗಿಲು ಅಕ್ರಮವಾಸಿಗಳಿಗೆ ಐಷಾರಾಮಿ ಫ್ಲ್ಯಾಟ್ ಹಂಚಿಸಿದ್ದು!!
ನೀರಿನ ದರ ಏರಿಸಿದ್ದು – ಕಸಕ್ಕೆ ಟ್ಯಾಕ್ಸ್ ಹಾಕಿಸಿದ್ದು!!
ಬಾಣಂತಿಯರಿಗೆ ಸಾವಿನ ಭಾಗ್ಯ ಕರುಣಿಸಿದ್ದು!!
ಅನ್ನಭಾಗ್ಯದ 10 ಕೆಜಿ ಅಕ್ಕಿ ನೀಡದೆ ವಂಚಿಸಿದ್ದು!!
ದ್ವೇಷ ಭಾಷಣ ಕಾಯ್ದೆ ಜಾರಿಗೆ ತರಿಸಿದ್ದು!!
ಆರ್ಸಿಬಿ ವಿಜಯೋತ್ಸವದಲ್ಲಿ ಕನ್ನಡಿಗರ ಕೊಲೆ ಮಾಡಿಸಿದ್ದು!!
ಬಡವರಿಗೆ ಕಲುಷಿತ ನೀರು ಕುಡಿಸಿ ಸಾಯಿಸಿದ್ದು!!
ಪರಪ್ಪನ ಅಗ್ರಹಾರವನ್ನು ಐಷಾರಾಮಿ ರೆಸಾರ್ಟ್ ಆಗಿಸಿದ್ದು!!
ಹೀಗೆ ಒಟ್ಟು 40ಕ್ಕೂ ಹೆಚ್ಚು ಅಂಶಗಳನ್ನು ಪಟ್ಟಿ ಮಾಡಿರುವ ಛಲವಾದಿ ನಾರಾಯಣಸ್ವಾಮಿ, ಇವಿಷ್ಟು ಸಾಧನೆಗಳು ನಮ್ಮ ಕಣ್ಣ ಮುಂದೆ ಕಾಣಿಸಿದ್ದು. ಇವುಗಳನ್ನು ಹೊರತುಪಡಿಸಿ ಯಾವುದಾದರೂ ಸಾಧನೆ ಬಿಟ್ಟುಹೋದಲ್ಲಿ ದಯವಿಟ್ಟು ನಮೂದಿಸತಕ್ಕದ್ದು ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯನವರ ದಾಖಲೆಯ ಸಂಭ್ರಮಕ್ಕೆ ಬಿಜೆಪಿ ಈ ರೀತಿಯಾಗಿ ಕಪ್ಪು ಚುಕ್ಕೆ ಇಡಲು ಮುಂದಾಗಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ.








