ಬೆಂಗಳೂರು, ಮೇ 25 : ಕೊರೋನಾ ವೈರಸ್ ಸೋಂಕು ಹರಡುವ ಭೀತಿಯಿಂದ ಬಿಎಂಟಿಸಿ ಪಾಸ್ ಪಡೆದು ಬಸ್ ಪ್ರಯಾಣ ಮಾಡುವ ಅವಕಾಶ ಕಲ್ಪಿಸಿತ್ತು. ಇದೀಗ ಟಿಕೆಟ್ ಮೂಲಕವೂ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು, ಬಸ್ ಟಿಕೆಟ್ ದರವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.
ಕೊರೋನಾ ಸೋಂಕಿನ ಭೀತಿಯ ಈ ಸಮಯದಲ್ಲಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವಿನ ನಗದು ವಿನಿಮಯ ವ್ಯವಹಾರವನ್ನು ಕಡಿಮೆ ಗೊಳಿಸುವ ನಿಟ್ಟಿನಿಂದ ಬಿಎಂಟಿಸಿ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿದೆ. ಇದೀಗ ಕಿಲೋಮೀಟರ್ ಆಧಾರದಲ್ಲಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದ್ದು, ಪ್ರಯಾಣ ದರ 5 ರೂ ಗುಣಕದಲ್ಲಿ ಇದೆ. ನಾಳೆಯಿಂದ ಪರಿಷ್ಕೃತ ಬಸ್ ಟಿಕೆಟ್ ದರ ಜಾರಿಗೆ ಬರಲಿದ್ದು, ಪ್ರಯಾಣಿಕರು ಸರಿಯಾಗಿ ಚಿಲ್ಲರೆ ಕೊಟ್ಟು, ಹಣ ವಿನಿಮಯವನ್ನು ಕಡಿಮೆಗೊಳಿಸುವಂತೆ ಬಿಎಂಟಿಸಿ ಪ್ರಯಾಣಿಕರಲ್ಲಿ ವಿನಂತಿ ಮಾಡಿ ಕೊಂಡಿದೆ. ವಾರದ ಪಾಸು, ಮಾಸಿಕ ಪಾಸ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ.
ಪರಿಷ್ಕೃತ ಬಸ್ ಟಿಕೆಟ್ ದರ
2 ಕಿ.ಮೀ ಪ್ರಯಾಣಕ್ಕೆ 5 ರೂಪಾಯಿ
3 ರಿಂದ 4 ಕಿ.ಮೀ ಪ್ರಯಾಣಕ್ಕೆ 10 ರೂಪಾಯಿ
5 ರಿಂದ 6 ಕಿ.ಮೀ ಪ್ರಯಾಣಕ್ಕೆ 15 ರೂಪಾಯಿ
7 ರಿಂದ 14 ಕಿ.ಮೀ ಪ್ರಯಾಣಕ್ಕೆ 20 ರೂಪಾಯಿ
15 ರಿಂದ 40 ಕಿ.ಮೀ ಪ್ರಯಾಣಕ್ಕೆ 25 ರೂಪಾಯಿ
41 ಕಿ.ಮೀಗೂ ಹೆಚ್ಚಿನ ದೂರ ಪ್ರಯಾಣಕ್ಕೆ 30 ರೂ








