ಜಮ್ಮು ಕಾಶ್ಮೀರದ (Jammu Kashmir) ಪೂಂಚ್ನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಕರ್ನಾಟಕದ (Karnataka) ಸೈನಿಕರ ಪಾರ್ಥಿವ ಶರೀರಗಳು ತವರಿಗೆ ತಲುಪಿವೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಯೋಧ ಅನೂಪ್ ಪೂಜಾರಿ ರವರ ಅಂತಿಮ ಯಾತ್ರೆ ನಡೆಯಲಿದೆ. ಕುಂದಾಪುರದ ಬೀಜಾಡಿ ವರೆಗೆ ಪಾರ್ಥಿವ ಶರೀರ ಮೆರವಣಿಗೆ ಸಾಗಲಿದೆ. ಸುಮಾರು 5,000 ಜನ ಭಾಗಿಯಾಗುವ ನಿರೀಕ್ಷೆ ಇದೆ. ಅಂತಿಮ ಯಾತ್ರೆ ಮುಗಿಸಿ ಹುತಾತ್ಮ ಯೋಧನ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು. ಬೀಜಾಡಿ ಗ್ರಾಮದ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದು, ಕುಟುಂಬದ ಆಪ್ತರಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೀಜಾಡಿ ಪಡು ಸರ್ಕಾರಿ ಶಾಲಾ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಪ್ತರು, ಸಾರ್ವಜನಿಕರು, ಜನಪ್ರತಿನಿಧಿಗಳಿಗೆ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ಅಂತಿಮ ಸಂಸ್ಕಾರ ಪ್ರಕ್ರಿಯೆ ನಡೆಯಲಿದೆ.