ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಆಸ್ಪತ್ರೆಯಿಂದ ಬಿಡುಗಡೆ
ಮುಂಬೈ, ಜುಲೈ 27: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಇಬ್ಬರೂ ಸಂಪೂರ್ಣವಾಗಿ ಚೇತರಿಸಿಕೊಂಡು ಮುಂಬೈನ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹಿಂದಿರುಗಿದ್ದಾರೆ ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.
ನಿಮ್ಮೆಲ್ಲರ ನಿರಂತರ ಪ್ರಾರ್ಥನೆ ಹಾಗೂ ಶುಭ ಹಾರೈಕೆಗಳಿಗೆ ಎಲ್ಲರಿಗೂ ಧನ್ಯವಾದಗಳು. ಶಾಶ್ವತವಾಗಿ ನಿಮಗೆಲ್ಲರಿಗೂ ಋಣಿಯಾಗಿರುವೆ . ಐಶ್ವರ್ಯಾ ಮತ್ತು ಆರಾಧ್ಯಾ ಇಬ್ಬರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರು ಈಗ ಮನೆಯಲ್ಲಿದ್ದಾರೆ. ನಾನು ಮತ್ತು ತಂದೆ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದೇವೆ ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಜುಲೈ 11ರಂದು ಅಭಿಷೇಕ್ ಮತ್ತು ಅಮಿತಾಬ್ ಬಚ್ಚನ್ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಐಶ್ವರ್ಯಾ ರೈ ಹಾಗೂ ಆರಾಧ್ಯಾ ರ ವರದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು ಮತ್ತು ಅವರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು.ಆದರೆ ಒಂದು ವಾರದ ಬಳಿಕ ಅವರಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು.








