ಬಾಲಿವುಡ್ ನ ಲೆಜೆಂಡ್ ದಿಲೀಪ್ ಕುಮಾರ್ ಅಗಲಿಕೆಗೆ ಮೋದಿ ಸೇರಿದಂತೆ ಗಣ್ಯರು ಸಿನಿತಾರೆಯರಿಂದ ಸಂತಾಪ..!
ಮುಂಬೈ: ಬಾಲಿವುಡ್ ನ ಲೆಜೆಂಡರಿ ನಟ ದಿಲೀಪ್ ಕುಮಾರ್ ಅವರು ಇಂದು ವಿಧಿವಶರಾಗಿದ್ದಾರೆ.. ಕೆಲ ದಿನಗಳಿಂದ ಅನಾರೋಗ್ಯದಿಂದಾಗಿ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟ್ರ್ಯಾಜಿಡಿ ಕಿಂಗ್ , ಚಿಕಿತ್ಸೆ ಫಲಕಾರಿಯಾಗದೇ ತಮ್ಮ 98ನೇ ವಯಸ್ಸಿನಲ್ಲಿ ಬದುಕಿನ ಪಯಣ ಮುಗಿಸಿದ್ದಾರೆ.
ವಯೋಸಹಜ ಕಾಯಿಲೆ ಇಂದ ಬಳಲುತ್ತಿದ್ದ ನಟ ದಿಲೀಪ್ ಕುಮಾರ್ ಜೂನ್ 29ರಂದು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಟ ಕೊನೆಯುಸಿರೆಳೆದರು.
ಅವರಿಗೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಿನಿಮಾ ತಾರೆಯರು ಸಂತಾಪ ಸೂಚಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ
“ದಿಲೀಪ್ ಕುಮಾರ್ ‘ಭಾರತೀಯ ಸಿನಿಮಾದ ದಿಗ್ಗಜ’ರಾಗಿ ನೆನಪಿನಲ್ಲಿ ಉಳಿಯುತ್ತಾರೆ. ಸರಿಸಾಟಿಯಿಲ್ಲದ ಪ್ರತಿಭೆಯ ನಟರಾಗಿ ಅನುಗ್ರಹಿತರಾಗಿದ್ದವರು. ಈ ಕಾರಣದಿಂದಾಗಿ ತಲೆಮಾರುಗಳ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತಿಗೆ ಅಪಾರ ನಷ್ಟವಾಗಿದೆ. ಈ ಸಂದರ್ಭದಲ್ಲಿ ಅವರ ಕುಟುಂಬ, ಸ್ನೇಹಿತರು ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ” ಎಂದು ಮೋದಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ
“ ಭಾರತೀಯ ಚಿತ್ರರಂಗಕ್ಕೆ ಶ್ರೇಷ್ಠ ನಾಯಕರೊಬ್ಬರ ನಷ್ಟವಾಗಿದೆ. ಅದ್ಭುತ ನಟನೆ ಹಾಗೂ ಅಪ್ರತಿಮ ಪಾತ್ರಗಳಿಂದ ತಲೆಮಾರಿಂದ ತಲೆಮಾರಿನ ಸಿನಿಮಾ ಪ್ರಿಯರನ್ನು ರಂಜಿಸಿದ್ದಾರೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
“ದಿಲೀಪ್ ಕುಮಾರ್ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಅಸಾಧಾರಣ ಕೊಡುಗೆಗಾಗಿ ಮುಂದಿನ ಪೀಳಿಗೆಯು ಸದಾ ನೆನಪಿನಲ್ಲಿಟ್ಟುಕೊಳ್ಳಲಿದೆ. ದಿಲೀಪ್ ಕುಮಾರ್ ನಿಧನಕ್ಕೆ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್
“ಭಾರತದ ಹೃದಯದಲ್ಲಿ ದಿಲೀಪ್ ಕುಮಾರ್ ಎಂದೆಂದಿಗೂ ಚಿರಾಯು” ಎಂದು ಸಂತಾಪ ಸೂಚಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್
“ಶ್ರೀ ದಿಲೀಪ್ ಕುಮಾರ್ ಅತ್ಯುತ್ತಮ ಹಾಗೂ ನೈಜ ನಟರಾಗಿದ್ದು, ಭಾರತೀಯ ಚಿತ್ರರಂಗ್ಕಕೆ ಆದರ್ಶಪ್ರಾಯವಾದ ಕೊಡುಗೆಗಾಗಿ ಎಲ್ಲರಿಂದಲೂ ಗೌರವಿಸಲ್ಪಟ್ಟಿದ್ದಾರೆ. ‘ಗಂಗಾ ಜಮುನಾ’ಗಳಂತಹ ಚಿತ್ರಗಳಲ್ಲಿ ಅವರ ಅಭಿಯನವು ಲಕ್ಷಾಂತರ ಸಿನಿ ಪ್ರೇಮಿಗಳ ಹೃದಯವನ್ನು ತಟ್ಟಿವೆ. ಅವರ ನಿಧನದಿಂದ ಅತೀವ ಬೇಸರವಾಗಿದೆ” ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ್
”ಸಾರ್ವಕಾಲಿಕ ಶ್ರೇಷ್ಠ ನಟ, ಅದ್ಭುತ ವಾಗ್ಮಿ ಮತ್ತು ಸರಳತೆಯ ಸಾಮ್ರಾಟ್ ಎಂದು ಜಗತ್ತು ದಿಲೀಪ್ ಕುಮಾರ್‌ರನ್ನು ಶ್ಲಾಘಿಸಿತ್ತು. ಅನೇಕ ತಲೆಮಾರಿಗೆ ಅವರು ಸ್ಫೂರ್ತಿಯಾಗಿ ಉಳಿಯಲಿದ್ದಾರೆ. ಲೆಜೆಂಡ್‌ಗಳು ಶಾಶ್ವತವಾಗಿ ಇರ್ತಾರೆ” ಎಂದು ಕಿಚ್ಚ ಸುದೀಪ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಮಿತಾಭ್ ಬಚ್ಚನ್
“ಭಾರತೀಯ ಚಿತ್ರರಂಗದ ಇತಿಹಾಸವನ್ನು ಬರೆಯುವಾಗಲೆಲ್ಲಾ ‘ಬಿಫೋರ್ ದಿಲೀಪ್ ಕುಮಾರ್ – ಆಫ್ಟರ್ ದಿಲೀಪ್ ಕುಮಾರ್’ ಆಗಿರಬೇಕು” ಎಂದು ಹೇಳಿದ್ದಾರೆ.
ಅಜಯ್ ದೇವಗನ್
“ದಿಗ್ಗಜ ನಟನೊಂದಿಗೆ ವೈಯಕ್ತಿಕವಾಗಿ, ವೇದಿಕೆಗಳಲ್ಲಿ ಕಳೆದ ಕ್ಷಣಗಳು ನೆನಪಿನಲ್ಲಿದೆ. ಅವರೊಂದು ಸಂಸ್ಥೆ, ಸಮಯಮೀರಿದ ನಟ. ಅವರ ಸಾವಿನ ಸುದ್ದಿ ಹೃದಯ ಛಿದ್ರಗೊಳಿಸಿದೆ” ಎಂದು ಸಂತಾಪ ಸೂಚಿಸಿದ್ದಾರೆ.
ಅಕ್ಷಯ್ ಕುಮಾರ್
”ಜಗತ್ತಿಗೆ ಅನೇಕರು ಹೀರೋಗಳು ಆಗಬಹುದು. ಆದರೆ, ನಮಗೆ ಅವರೇ ಹೀರೋ. ದಿಲೀಪ್ ಕುಮಾರ್ ಅವರ ಭಾರತೀಯ ಸಿನಿಮಾದ ಸಂಪೂರ್ಣ ಯುಗವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಅವರ ಕುಟುಂಬಕ್ಕೆ ಈ ನೋವು ಭರಿಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.








