ಮುಂಬೈ: ಭಾರತೀಯ ಚಿತ್ರರಂಗದ ಪಾಲಿನ ಮರೆಯದ ಮಾಣಿಕ್ಯ, ಬಾಲಿವುಡ್‌ನ ‘ಹಿ-ಮ್ಯಾನ್’ ಖ್ಯಾತಿಯ ಹಿರಿಯ ನಟ ಧರ್ಮೇಂದ್ರ ಅವರು ಜೀವನದ ಯಾನ ಮುಗಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ನಟನೆ, ಸ್ಟೈಲ್ ಮತ್ತು ಕಟ್ಟುಮಸ್ತಾದ ದೇಹದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಧರ್ಮೇಂದ್ರ ಅವರ ಅಗಲಿಕೆ ಇಡೀ ಚಿತ್ರರಂಗವನ್ನೇ ಅನಾಥವನ್ನಾಗಿಸಿದೆ.
ಇತ್ತೀಚೆಗಷ್ಟೇ ಅಗಸ್ತ್ಯನಂದ ಅಭಿನಯದ ’21’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿತ್ತು. ಇದರಲ್ಲಿ ಹಿರಿಯ ನಟ ಧರ್ಮೇಂದ್ರ ಅವರ ಲುಕ್ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದರು. ತಮ್ಮ ನೆಚ್ಚಿನ ನಟ ಮತ್ತೆ ತೆರೆಯ ಮೇಲೆ ರಾರಾಜಿಸಲಿದ್ದಾರೆ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ, ಇದೀಗ ಅವರ ನಿಧನದ ಸುದ್ದಿ ಬರಸಿಡಿಲಿನಂತೆ ಎರಗಿದೆ. 65 ವರ್ಷಗಳ ಸುದೀರ್ಘ ಸಿನಿ ಪಯಣದಲ್ಲಿ ನೂರಾರು ಹಿಟ್ ಚಿತ್ರಗಳನ್ನು ನೀಡಿದ ಈ ಮೇರು ನಟ, ಕೇವಲ ನಟನಾಗಿ ಮಾತ್ರವಲ್ಲದೆ ದೊಡ್ಡ ಕುಟುಂಬದ ಹಿರಿಯ ಜೀವವಾಗಿಯೂ ಎಲ್ಲರಿಗೂ ಮಾದರಿಯಾಗಿದ್ದರು.
ಧರ್ಮೇಂದ್ರ ಅವರ ವೈಯಕ್ತಿಕ ಜೀವನವು ಸಿನಿಮಾದಷ್ಟೇ ವರ್ಣರಂಜಿತವಾಗಿತ್ತು. ಅವರು ಎರಡು ಬಾರಿ ವಿವಾಹವಾಗಿದ್ದು, ಎರಡೂ ಕುಟುಂಬಗಳನ್ನು ಸಮತೂಕದಲ್ಲಿ ನಿಭಾಯಿಸಿದ್ದರು. 1954ರಲ್ಲಿ, ತಾವು ಇನ್ನೂ 19 ವರ್ಷದವರಿದ್ದಾಗ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. ಬಳಿಕ 1980ರಲ್ಲಿ ಬಾಲಿವುಡ್‌ನ ‘ಡ್ರೀಮ್ ಗರ್ಲ್’ ಹೇಮಾ ಮಾಲಿನಿ ಅವರ ಸೌಂದರ್ಯಕ್ಕೆ ಮಾರುಹೋಗಿ ಎರಡನೇ ವಿವಾಹವಾದರು. ಮೊದಲ ಪತ್ನಿ ಪ್ರಕಾಶ್ ಕೌರ್ ಅವರಿಗೆ ವಿಚ್ಛೇದನ ನೀಡದೆ ಹೇಮಾ ಮಾಲಿನಿಯನ್ನು ವರಿಸಿದ್ದು ಆ ಕಾಲದಲ್ಲಿ ದೊಡ್ಡ ಮಟ್ಟದ ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಆದರೂ, ಕಾಲಕ್ರಮೇಣ ಅವರು ಎಲ್ಲರನ್ನೂ ಒಂದೇ ಕುಟುಂಬದಂತೆ ನೋಡಿಕೊಂಡರು.
ಬಾಲಿವುಡ್ ಆಳುತ್ತಿರುವ ಡಿಯೋಲ್ ಕುಡಿಗಳು
ಧರ್ಮೇಂದ್ರ ಅವರ ಕುಟುಂಬದ ಬಹುತೇಕ ಸದಸ್ಯರು ಬಣ್ಣದ ಲೋಕದ ನಂಟನ್ನು ಹೊಂದಿದ್ದಾರೆ.
* ಮೊದಲ ಪತ್ನಿ ಪ್ರಕಾಶ್ ಕೌರ್ ಮಕ್ಕಳು: ಈ ದಂಪತಿಗೆ ನಾಲ್ಕು ಮಕ್ಕಳು. ಗಂಡು ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ತಂದೆಯ ಹಾದಿಯಲ್ಲೇ ಸಾಗಿ ಬಾಲಿವುಡ್‌ನ ಸ್ಟಾರ್ ನಟರಾಗಿ ಬೆಳೆದರು. ಇನ್ನು ಹೆಣ್ಣುಮಕ್ಕಳಾದ ವಿಜೇತಾ ಮತ್ತು ಅಜಿತಾ ಡಿಯೋಲ್ ಚಿತ್ರರಂಗದ ಪ್ರಚಾರದಿಂದ ದೂರವಿದ್ದು, ಸರಳ ಜೀವನ ನಡೆಸುತ್ತಿದ್ದಾರೆ. ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವುದು ತೀರಾ ಅಪರೂಪ.
* ಎರಡನೇ ಪತ್ನಿ ಹೇಮಾ ಮಾಲಿನಿ ಮಕ್ಕಳು: ಈ ಜೋಡಿಗೆ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಶಾ ಡಿಯೋಲ್ ಚಿತ್ರರಂಗದಲ್ಲಿ ಗುರುತಿಸಿಕೊಂಡರೆ, ಅಹಾನಾ ಮದುವೆಯ ನಂತರ ವಿದೇಶದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಇಶಾ ಡಿಯೋಲ್ ತಮ್ಮ ಪತಿ ಭರತ್ ತಖ್ತಾನಿ ಅವರಿಂದ ವಿಚ್ಛೇದನ ಪಡೆದ ಸುದ್ದಿಯೂ ಚರ್ಚೆಯಲ್ಲಿತ್ತು.
ಧರ್ಮೇಂದ್ರ ಕೇವಲ ತಂದೆಯಾಗಿ ಮಾತ್ರವಲ್ಲದೆ, ಅಜ್ಜನಾ ಪ್ರೀತಿಯನ್ನೂ ಧಾರಾಳವಾಗಿ ಹಂಚಿದವರು.
* ಸನ್ನಿ ಡಿಯೋಲ್ ಮತ್ತು ಪೂಜಾ ಡಿಯೋಲ್ ದಂಪತಿಗೆ ಕರಣ್ ಮತ್ತು ರಾಜ್‌ವೀರ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಇವರು ಈಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
* ಬಾಬಿ ಡಿಯೋಲ್ ಮತ್ತು ತಾನ್ಯಾ ದಂಪತಿಗೆ ಆರ್ಯಮಾನ್ ಮತ್ತು ಧರಂ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
* ಹಿರಿಯ ಪುತ್ರಿ ಅಜಿತಾ ಕಿರಣ್ ಚೌಧರಿಯವರನ್ನು ವರಿಸಿದ್ದು, ಅವರಿಗೆ ನಿಕಿತಾ ಮತ್ತು ಪ್ರಿಯಾಂಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
* ಮತ್ತೋರ್ವ ಪುತ್ರಿ ವಿಜೇತಾ ವಿವೇಕ್ ಗಿಲ್ ಅವರನ್ನು ಮದುವೆಯಾಗಿದ್ದು, ಪ್ರೇರಣಾ ಗಿಲ್ ಮತ್ತು ಸಾಹಿಲ್ ಗಿಲ್ ಎಂಬ ಮಕ್ಕಳಿದ್ದಾರೆ.
* ಇತ್ತ ಇಶಾ ಡಿಯೋಲ್‌ಗೆ ರಾಧ್ಯಾ ಮತ್ತು ಮಿರಾಯಾ ಎಂಬ ಮುದ್ದಾದ ಹೆಣ್ಣು ಮಕ್ಕಳಿದ್ದರೆ, ಅಹಾನಾ ಡಿಯೋಲ್ ಮೂರು ಮಕ್ಕಳ ತಾಯಿಯಾಗಿದ್ದಾರೆ.
ಹೀಗೆ ಮಕ್ಕಳು, ಸೊಸೆಯಂದಿರು, ಅಳಿಯಂದಿರು ಮತ್ತು ಮೊಮ್ಮಕ್ಕಳ ತುಂಬು ಕುಟುಂಬವನ್ನು ಅಗಲಿರುವ ಧರ್ಮೇಂದ್ರ, ಭಾರತೀಯ ಚಿತ್ರರಂಗದಲ್ಲಿ ತುಂಬಲಾರದ ನಷ್ಟವನ್ನು ಉಂಟುಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಮತ್ತು ಗಣ್ಯರು ಪ್ರಾರ್ಥಿಸುತ್ತಿದ್ದಾರೆ.








