“ಲೈಂಗಿಕ ಉದ್ದೇಶವಿಲ್ಲದೇ ಮಕ್ಕಳ ಕೆನ್ನೆ ಮುಟ್ಟಿದರೆ ಅದು ಅಪರಾಧ ಆಗುವುದಿಲ್ಲ”
ಲೈಂಗಿಕ ಉದ್ದೇಶವಿಲ್ಲದೇ ಮಕ್ಕಳ ಕೆನ್ನೆ ಮುಟ್ಟಿದರೆ ಅದು ಅಪರಾಧ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಹೌದು ಇಂತಹದ್ದೇ ಸಂಬಂಧಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯಾಗಿದ್ದ 46 ವರ್ಷದ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿದೆ.
ಅಲ್ಲದೇ ಲೈಂಗಿಕ ಉದ್ದೇಶವಿರದೇ ಮಗುವಿನ ಕೆನ್ನೆಯನ್ನು ಸ್ಪರ್ಶಿಸುವುದನ್ನು ಲೈಂಗಿಕ ದೌರ್ಜನ್ಯ ಎಂಬುದಾಗಿ ಪರಿಗಣಿಸಲಾಗದು ಎಂದು ಹೇಳಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಶಿಂಧೆ ಅವರಿರುವ ಏಕಸದಸ್ಯ ನ್ಯಾಯಪೀಠ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಠಾಣೆ ಜಿಲ್ಲೆಯ ರಾಬೋಡಿ ಠಾಣೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಅಂಗಡಿ ನಡೆಸುತ್ತಿರುವ ಮೊಹಮ್ಮದ್ ಅಹ್ಮದ್ ಉಲ್ಲಾ ಎಂಬುವವರು, ಅಂಗಡಿಗೆ ಬಂದಿದ್ದ 8 ವರ್ಷದ ಬಾಲಕಿಯ ಕೆನ್ನೆ ಸವರಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಸಲ್ಲಿಸಿದ್ದ ದೂರಿನನ್ವಯ ಉಲ್ಲಾ ಅವರನ್ನು ಕಳೆದ ವರ್ಷ ಜುಲೈನಲ್ಲಿ ಬಂಧಿಸಿ, ನವಿಮುಂಬೈನ ತಲೋಜಾ ಜೈಲಿನಲ್ಲಿರಿಸಲಾಗಿತ್ತು. ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿಂಧೆ, ಲೈಂಗಿಕ ಉದ್ದೇಶವಿಲ್ಲದೇ ಬಾಲಕಿಯ ಕೆನ್ನೆ ಸ್ಪರ್ಶ ಮಾಡಿರುವುದು ಪೋಕ್ಸೊ ಕಾಯ್ದೆಯಡಿ ವಿವರಿಸಿರುವಂತೆ ಲೈಂಗಿಕ ದೌರ್ಜನ್ಯ ಎನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.








