ನಮ್ಮ ಸಮಾಜಕ್ಕೆ ಬೊಮ್ಮಾಯಿ ಮೋಸ ಮಾಡಲ್ಲ : ಯತ್ನಾಳ್
ಹಾವೇರಿ : ನಮ್ಮ ಸಮಾಜಕ್ಕೆ ಮೋಸ ಮಾಡಿದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ. ಆದ್ರೆ ಈಗಿನ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂಗಳಂತೆ ನಮ್ಮ ಸಮಾಜಕ್ಕೆ ಮೋಸ ಮಾಡುವುದಿಲ್ಲ. ಅವರು ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಹಾನಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ನಾನು ಮೀಸಲಾತಿ ಪರಿಷ್ಕರಣೆ ಬೇಡಿಕೆಯನ್ನು ವಿಧಾನಸೌಧದಲ್ಲಿ ಕೇಳಿದ್ದೆ. ಬಸವರಾಜ ಬೊಮ್ಮಾಯಿ ಅವರು ಗೃಹ ಮಂತ್ರಿ ಆಗಿದ್ದಾಗ ನಮ್ಮ ಬೇಡಿಕೆಗೆ ದೀರ್ಘ ಉತ್ತರ ನೀಡಿದ್ದರು.
ಆಗ ಅಂದಿನ ಸಿಎಂ ಆರು ತಿಂಗಳೊಳಗೆ ಬೇಡಿಕೆ ಈಡೇರಿಸೋದಾಗಿ ಭರವಸೆ ನೀಡಿದ್ದರು. ಆದ್ರೆ ಈವರೆಗೂ ಬೇಡಿಕೆ ಈಡೇರಿಲ್ಲ ಎಂದು ಬೇಸರ ಹೊರಹಾಕಿದರು.
ಇನ್ನು ಸೆಪ್ಟೆಂಬರ್ 15ಕ್ಕೆ ಆರು ತಿಂಗಳ ಗಡುವು ಮುಗಿಯಲಿದ್ದು, ಕೂಡಲಸಂಗಮ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಸಮುದಾಯದ ಶಕ್ತಿ ಒಗ್ಗೂಡಿಸಲು ಪ್ರಯತ್ನ ನಡೆಯುತ್ತಿದೆ. ನಾವೆಲ್ಲರೂ ಸ್ವಾಮೀಜಿಗಳ ಬೆಂಬಲಕ್ಕೆ ನಿಂತುಕೊಂಡಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಮುಂದಿನ ಚುನಾವಣೆ ನೇತೃತ್ವದ ಬಗ್ಗೆ ಮಾತನಾಡಿ, ಯಾರೇ ಮುಖ್ಯಮಂತ್ರಿ ಇದ್ದರೂ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ ಎಂದರು.









