ಬಾರ್ಡರ್ ಗವಾಸ್ಕರ್ ಸರಣಿ ಆಶಷ್ ಸರಣಿಯಷ್ಟೇ ಮಹತ್ವ ಪಡೆದಿದೆ- ಸ್ಟೀವ್ ವಾ
ಆಶಷ್ ಸರಣಿಯಷ್ಟೇ ಮಹತ್ವವನ್ನು ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯೂ ಪಡೆಕೊಂಡಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ವೀವ್ ವಾ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತದೆ. ಹೀಗಾಗಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯು ಆಶಷ್ ಸರಣಿಗೆ ಸಮಾನವಾಗಿದೆ ಎಂದು ಸ್ಟೀವ್ ವಾ ಹೇಳಿದ್ದಾರೆ. ಆಶಷ್ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಇದು ಸಾಂಪ್ರದಾಯ ಬದ್ಧ ವೈರಿಗಳ ನಡುವಿನ ಹೋರಾಟವೂ ಆಗಿದೆ. ಯಾಕಂದ್ರೆ ಈ ಸರಣಿ ನಡೆಯುತ್ತಿರುವುದು ಬೂದಿಗಾಗಿ ಅಂದ್ರೆ ನಂಬುತ್ತೀರಾ. ಹೌದು, 1882ರಲ್ಲಿ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನೆಲದಲ್ಲೇ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು. ಆಗ ಬ್ರಿಟನ್ ಪತ್ರಿಕೆಯೊಂದು ಈ ರೀತಿ ವರದಿ ಮಾಡಿತ್ತು. ಇಂಗ್ಲೀಷ್ ಕ್ರಿಕೆಟ್ ಸತ್ತು ಹೋಗಿದೆ. ಓವಲ್‍ನಲ್ಲಿ ಶವವನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ. ಬೂದಿಯನ್ನು ಆಸ್ಟ್ರೇಲಿಯ ತೆಗೆದುಕೊಂಡು ಹೋಗಿದೆ ಅಂತ. ಅಲ್ಲಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಶಷ್ ಟೆಸ್ಟ್ ಸರಣಿ ನಡೆಯುತ್ತಿದೆ.
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಉತ್ತಮ ಮಟ್ಟದ ಸ್ಪರ್ಧೆ ನಡೆಯುತ್ತಿದೆ. ಇದೇ ವೇಳೆ ಸ್ಟೀವ್ ವಾ ಅವರು ಕೊಲ್ಕತ್ತಾ ಟೆಸ್ಟ್ ಪಂದ್ಯದ ಸೋಲನ್ನು ಕೂಡ ನೆನಪು ಮಾಡಿಕೊಂಡ್ರು. ಅದೇ ರೀತಿ ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿದೆ ಎಂಬುದರ ಬಗ್ಗೆ ಸ್ಟೀವ್ ವಾ ತನ್ನ ಪುಸ್ತಕದಲ್ಲೂ ಬರೆದುಕೊಂಡಿದ್ದಾರೆ. ಸ್ಟೀವ್ ವಾ ಅವರಿಗೆ ಭಾರತದ ಒಡನಾಟವಿದೆ. ಪ್ರತಿ ವರ್ಷ ಅವರು ಭಾರತ ಪ್ರವಾಸ ಮಾಡುತ್ತಾರೆ. ಇಲ್ಲಿನ ಕ್ರಿಕೆಟ್ ಅಭಿಮಾನಿಗಳ ಕ್ರಿಕೆಟ್ ಪ್ರೀತಿಗೆ ಅವರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
ಮುಂಬರುವ ಡಿಸೆಂಬರ್ ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ಆಡಿಲೇಡ್ ನಲ್ಲಿ ನಡೆಯಲಿದೆ. ಡಿಸೆಂಬರ್ 3ರಿಂದ ಮೊದಲ ಟೆಸ್ಟ್ ಪಂದ್ಯ ನಡೆದ್ರೆ, ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 11ರಿಂದ ಹಾಗೂ ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಮತ್ತು ಅಂತಿಮ ಟೆಸ್ಟ್ ಪಂದ್ಯ ಜನವರಿ 3ರಿಂದ ಶುರುವಾಗಲಿದೆ.