ಬೆಂಗಳೂರು : ಆರ್ ಎಸ್ ಎಸ್ ನ ನಾಯಕರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪದಚ್ಯುತಿಗೆ ಸಂಚು ನಡೆಸುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದು, ಸಂಘ ಮತ್ತು ಬಿಎಸ್ ವೈ ಎರಡೂ ಒಂದೇ ಎಂದು ಟಾಂಗ್ ನೀಡಿದ್ದಾರೆ.
ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಕಾಂಗ್ರೆಸ್ ಪಕ್ಷದಲ್ಲೇ ಒಳಗಿನ ವಾತಾವರಣ ಸೂಕ್ಷ್ಮವಾಗಿದೆ. ಆದ್ದರಿಂದ ಅವರು ಬಿಜೆಪಿ ಬಗ್ಗೆ ಅವರು ಮಾತಾಡೋದು ಬೇಡ ಎಂದು ಹೇಳಿದರು. ಯಡಿಯೂರಪ್ಪನವರು ಸಂಘದ ಹಿನ್ನೆಲೆಯಿಂದ ಬಂದವರು. ಸಂಘ ಮತ್ತು ಬಿಎಸ್ ವೈ ಎರಡೂ ಒಂದೇ. ನಮ್ಮಲ್ಲಿ ವ್ಯತ್ಯಾಸಗಳು ಯಾವುದೂ ಇಲ್ಲ. ವ್ಯತ್ಯಾಸಗಳಿದ್ದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ ಎಂದು ಸಿದ್ದರಾಮಯ್ಯ ಅವರಿಗೆ ಬೊಮ್ಮಾಯಿ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಟ್ವೀಟ್ ಮಾಡಿ, ರಾಜ್ಯ ಬಿಜೆಪಿ ಸ್ಪಷ್ಟವಾಗಿ ಎರಡು ಗುಂಪುಗಳಾಗಿ ಒಡೆದುಹೋಗಿದೆ. ಬಿಎಸ್ ವೈ ಅವರ ಪದಚ್ಯುತಿಗೆ ಕೆಲವು ಆರ್ ಎಸ್ ಎಸ್ ಸಮೀಪವರ್ತಿ ನಾಯಕರು ನಡೆಸುತ್ತಿರುವ ಪ್ರಯತ್ನಕ್ಕೆ ಕೆಜೆಹಳ್ಳಿ-ಡಿಜೆಹಳ್ಳಿ ಪ್ರಕರಣವನ್ನು ಯಥೇಚ್ಚವಾಗಿ ಬಳಸಲಾಗುತ್ತಿದೆ ಎಂದು ಬರೆದುಕೊಂಡಿದ್ದರು.









