ರಾಯಚೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕು ಹರಡದಂತೆ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನತೆಗೆ ಸರ್ಕಾರ ಮನವಿ ಮಾಡಿದೆ. ಅಲ್ಲದೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಏತನ್ಮಧ್ಯೆ, ನಿಯಮಗಳನ್ನು ಪಾಲಿಸಬೇಕಾದ ಆರೋಗ್ಯ ಸಚಿವರೇ ಇಂದು ನಿಯಮಗಳನ್ನು ಗಾಳಿಗೆ ತೂರಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇಂದು ಆರೋಗ್ಯ ಸಚಿವ ಶ್ರೀರಾಮುಲು ಸಿಂಧನೂರು ಪಟ್ಟಣಕ್ಕೆ ಭೇಟಿ ನೀಡಿ ಕೊರೊನಾ ತಡೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ, ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದ ಆರೋಗ್ಯ ಸಚಿವರು ಸಾಮಾಜಿಕ ಅಂತರದ ನಿಯಮವನ್ನು ಗಾಳಿಗೆ ತೂರಿದರು. ಅಲ್ಲದೆ ತಾವು ಮಾಸ್ಕ್ ಧರಿಸದೇ, ಸ್ಯಾನಿಟೈಸರ್ ಬಳಸದೇ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದರು.
ರಾಜ್ಯ ಸರ್ಕಾರ ಲಾಕ್ ಡೌನ್ ನಡುವೆಯೂ ಕೆಲ ವಿನಾಯಿತಿ ನೀಡಿದೆ. ಆದರೆ, ಸಾಮಾಜಿಕ ಅಂತರವನ್ನು ಸ್ಪಷ್ಟವಾಗಿ ಕಾಯ್ದುಕೊಳ್ಳುವಂತೆ ಮತ್ತೆ ಮತ್ತೆ ಮನವಿ ಮಾಡುತ್ತಲೇ ಇದೆ. ಆದ್ರೆ ರಾಮುಲು ಅವರು ಮಾತ್ರ ಪದೇ ಪದೇ ಲಾಕ್ ಡೌನ್ ನಿಯಮಗಳನ್ನು ಬ್ರೇಕ್ ಮಾಡುತ್ತಲೇ ಇದ್ದಾರೆ.








