ಮಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತೋರಿಸಲು ಹೈಕಮಾಂಡ್ ನಡೆಸಿದ ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್ ತಂತ್ರ ಸಂಪೂರ್ಣ ವಿಫಲವಾದಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಉಪಹಾರ ಸೇವಿಸಿ ಒಂದಾಗಿದ್ದೇವೆ ಎಂದು ಸಂದೇಶ ರವಾನಿಸಿದ ಕೆಲವೇ ದಿನಗಳಲ್ಲಿ, ಕರಾವಳಿ ನಗರಿ ಮಂಗಳೂರಿನಲ್ಲಿ ಬುಧವಾರ ನಡೆದ ಹೈಡ್ರಾಮಾ ಕಾಂಗ್ರೆಸ್ ವಲಯದಲ್ಲಿನ ಒಳಬೇಗುದಿಯನ್ನು ಮತ್ತೆ ಜಗಜ್ಜಾಹೀರು ಮಾಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣದ ಕಾರ್ಯಕರ್ತರು ಪರಸ್ಪರ ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದು, ವಿಮಾನ ನಿಲ್ದಾಣದ ಆವರಣ ಅಕ್ಷರಶಃ ರಣಾಂಗಣದಂತಾಗಿತ್ತು.
ನಿನ್ನೆ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ಭೇಟಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್ ಅವರಿಗೆ ಸ್ವಾಗತ ಕೋರುವ ನೆಪದಲ್ಲಿ ಉಭಯ ಬಣಗಳು ಶಕ್ತಿ ಪ್ರದರ್ಶನಕ್ಕೆ ಮುಂದಾದವು. ಡಿಕೆಶಿ ಆಪ್ತ ಮಿಥುನ್ ರೈ ನೇತೃತ್ವದ ತಂಡ ಡಿ.ಕೆ… ಡಿ.ಕೆ… ಎಂದು ಘೋಷಣೆ ಕೂಗುವ ಮೂಲಕ ವೇಣುಗೋಪಾಲ್ ಅವರಿಗೆ ಪರೋಕ್ಷವಾಗಿ ಡಿಕೆಶಿ ಪರ ಬ್ಯಾಟಿಂಗ್ ಮಾಡಿದರು. ನೂಕುನುಗ್ಗಲಿನಲ್ಲಿ ವೇಣುಗೋಪಾಲ್ ಕಾರು ಹತ್ತುವುದೇ ಕಷ್ಟವಾಯಿತು.
ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದ ತಂಡ ಸಿದ್ದು… ಸಿದ್ದು… ಪೂರ್ಣಾವಧಿ ಸಿಎಂ ಸಿದ್ದು ಎಂದು ಆಕಾಶ ತೂತು ಬೀಳುವಂತೆ ಘೋಷಣೆ ಕೂಗಿತು. ಈ ಮೂಲಕ ಸಿಎಂ ಕುರ್ಚಿ ಖಾಲಿ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಹೈಕಮಾಂಡ್ ಪ್ರತಿನಿಧಿಯ ಎದುರೇ ಸಿದ್ದರಾಮಯ್ಯ ಬಣ ರವಾನಿಸಿತು.
ಅಹಿಂದ ಶಕ್ತಿಯ ಅಬ್ಬರ ಮತ್ತು ಡಿಕೆಶಿ ಗೈರು
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವು ಮೇಲ್ನೋಟಕ್ಕೆ ಶತಮಾನೋತ್ಸವದ ಸಂಭ್ರಮವಾಗಿದ್ದರೂ, ಆಂತರಿಕವಾಗಿ ಇದೊಂದು ಸಿದ್ದರಾಮಯ್ಯನವರ ಅಹಿಂದ ಶಕ್ತಿ ಪ್ರದರ್ಶನದ ವೇದಿಕೆಯಾಗಿತ್ತು ಎಂದೇ ವಿಶ್ಲೇಷಿಸಲಾಗುತ್ತಿದೆ. ವೇದಿಕೆಯಲ್ಲಿ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್ರಂತಹ ಘಟಾನುಘಟಿಗಳಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಿರುವುದು ಮತ್ತು ಅವರು ಗೈರಾಗಿರುವುದು ಎದ್ದು ಕಾಣುತ್ತಿತ್ತು. ಇದು ಪಕ್ಷದೊಳಗಿನ ಬಣ ರಾಜಕೀಯ ಎಷ್ಟು ಆಳವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಘೋಷಣೆಗಳ ಗದ್ದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಸಿ. ವೇಣುಗೋಪಾಲ್ ಸುಮಾರು 20 ನಿಮಿಷಗಳ ಕಾಲ ಪ್ರತ್ಯೇಕವಾಗಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಮೂಲಗಳ ಪ್ರಕಾರ, ಇತ್ತೀಚೆಗೆ ಡಿಕೆಶಿ ಪಾಳಯದ ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆ ಬಗ್ಗೆ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಸಿದ್ದರಾಮಯ್ಯ ಅವರು ವೇಣುಗೋಪಾಲ್ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ನಾನು ಸಂಯಮ ಪಾಲಿಸುತ್ತಿದ್ದರೂ, ಎದುರಾಳಿ ಬಣದಿಂದ ಗೊಂದಲ ಸೃಷ್ಟಿಸುವ ಕೆಲಸ ಆಗುತ್ತಿದೆ. ಇದಕ್ಕೆ ಅಧಿವೇಶನದ ನಂತರ ಬ್ರೇಕ್ ಹಾಕಲೇಬೇಕು ಎಂದು ಸಿಎಂ ಖಡಕ್ ಆಗಿ ತಿಳಿಸಿದ್ದಾರೆ ಎನ್ನಲಾಗಿದೆ.
ತಲೆಕೆಡಿಸಿಕೊಳ್ಳದ ಡಿಕೆಶಿ
ಇತ್ತ ಮಂಗಳೂರು ಕಾರ್ಯಕ್ರಮದಿಂದ ದೂರವಿದ್ದರೂ, ವಿಮಾನ ನಿಲ್ದಾಣದಲ್ಲಿ ನಡೆದ ಘೋಷಣಾ ಪ್ರಹಸನದ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಅವರ ರಾಜಕೀಯ ಪ್ರಬುದ್ಧತೆಯನ್ನು ತೋರಿಸಿದೆ. ಅಭಿಮಾನಿಗಳು ಘೋಷಣೆ ಕೂಗುವುದು ಸಹಜ. 10 ವರ್ಷಗಳಿಂದ ನನ್ನ ಹೆಸರನ್ನು ಕೂಗುತ್ತಿದ್ದಾರೆ, ಹಾಗೆಯೇ ಸಿದ್ದರಾಮಯ್ಯನವರ ಹೆಸರನ್ನೂ ಕೂಗುತ್ತಾರೆ. ಮೋದಿ, ರಾಹುಲ್ ಗಾಂಧಿ ಹೆಸರನ್ನೂ ಕೂಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಇದನ್ನೇ ದೊಡ್ಡದು ಮಾಡಬಾರದು ಎಂದು ಹೇಳುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿಯದೆ ಜಾಣ್ಮೆಯ ಹೆಜ್ಜೆ ಇಟ್ಟಿದ್ದಾರೆ.
ಒಟ್ಟಿನಲ್ಲಿ, ಮಂಗಳೂರು ಘಟನೆಯು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಧಿವೇಶನ ಮುಗಿದ ಬಳಿಕ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಈ ಗದ್ದುಗೆ ಗುದ್ದಾಟಕ್ಕೆ ಶಾಶ್ವತ ಪರಿಹಾರ ಸಿಗಲಿದೆಯೇ ಅಥವಾ ಸಂಘರ್ಷ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.








