ಧಾರವಾಡ : ರಾಜ್ಯ ರಾಜಕಾರಣದಲ್ಲಿ ನಾಯಕರು ನಾಲಿಗೆ ಹರಿ ಬಿಡುವುದನ್ನು ಮತ್ತೆ ಮುಂದುವರೆಸಿದ್ದಾರೆ. ರಾಜಕೀಯ ಕಾವು ಹೆಚ್ಚಾಗುತ್ತಿದ್ದಂತೆ ನಾಯಕರ ಮಾತಿನ ಧಾಟಿ ಬದಲಾಗುತ್ತ ಸಾಗುತ್ತಿದೆ. ಶಾಸಕ ಬಸನಗೌಡ ಪಾಟೀಲ್ ಅವರು ರಾಹುಲ್ ಗಾಂಧಿ ವಿರುದ್ಧ ಮತ್ತೊಮ್ಮೆ ಹಗುರವಾಗಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಅವರು `ಮೋದಿ ವಿಷದ ಹಾವು ಇದ್ದಂತೆ’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) `ಸೋನಿಯಾ ಗಾಂಧಿ ವಿಷಕನ್ಯೆನಾ?’ ಎಂದು ಪ್ರಶ್ನಿಸಿದ್ದರು. ಈಗ ಮತ್ತೆ ರಾಹುಲ್ ಗಾಂಧಿ ಹುಚ್ಚ ಅಲ್ಲ, ಅರೆಹುಚ್ಚ ಎಂದು ಹೇಳುವ ಮೂಲಕ ನಾಲಿಗೆ ಹರಿ ಬಿಟ್ಟಿದ್ದಾರೆ.
ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi) ಅವರು ಹುಚ್ಚ ಅಲ್ಲ, ಅರೆಹುಚ್ಚ. ದೇಶದ ಬಗ್ಗೆ ಕಾಳಜಿ ಇಲ್ಲದವರನ್ನ ಅರೆಹುಚ್ಚ ಅನ್ನದೆ ಗ್ರೇಟ್ ಸ್ಕಾಲರ್ ಅನ್ಬೇಕಾ? ಎಂದು ಪ್ರಶ್ನಿಸಿದ ಅವರು, ಖರ್ಗೆ ಅವರ ಮಗ ಪ್ರಧಾನಿ ವಿರುದ್ಧ ಹಗುರವಾಗಿ ಮಾತನಾಡಿದ್ದಾನೆ. ಕಾಂಗ್ರೆಸ್ ನಲ್ಲಿ ಮೂರು ಬಿಟ್ಟವರು ಇದ್ದಾರೆ. ಮೋದಿ 150 ಕೋಟಿ ಜನರ ಆಶೀರ್ವಾದ ಪಡೆದು ಪ್ರಧಾನಿಯಾಗಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.








