ವಿಧಾನಸಭೆ ಚುನಾವಣೆಗೆ ಉತ್ಸಾಹದಿಂದ ಸ್ಪರ್ಧಿಸಿ ಕ್ಷೇತ್ರದಲ್ಲಿ ಚುರುಕಿನಿಂದ ಓಡಾಡಿ ಗೆಲುವಿನ ಹಾದಿಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ, ಕೊನೆಯ ಕ್ಷಣದಲ್ಲಿ ಯಾರ ಕಣ್ಣಿಗೂ ಬೀಳದೆ ನಾಪತ್ತೆಯಾಗಿದ್ದಾರೆ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದರೂ ಕೊನೆ ಕ್ಷಣದಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿಗೆ ಹೈಕಮಾಂಡ್ ಟಿಕೆಟ್ ನೀಡಿತ್ತು. ಪ್ರಬಲ ಆಕಾಂಕ್ಷಿಗಳಾಗಿದ್ದ ಬಿ.ವಿ.ಮಹೇಶ್ ಹಾಗೂ ವಿ.ಶೇಷು ಶಕ್ತಿಮೀರಿ ಬಿಜೆಪಿ ಪರವಾಗಿ ಮತಪ್ರಚಾರ ಮಾಡಿ ದ್ದರು. ಬುಧವಾರ ಮತದಾನ ಪ್ರಕ್ರಿಯೆಗೂ ಮುನ್ನ ಮಂಗಳವಾರ ಸಂಜೆಯಿಂದಲೇ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಚುನಾವಣೆಯಿಂದ ದೂರ ವಾಗಿದ್ದು, ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಎಂ.ನಾರಾಯಣಸ್ವಾಮಿ ಅವರಿಗೆ ಎಲ್ಲಾ ಆಕಾಂಕ್ಷಿಗಳು ಸೇರಿ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡು ಚುನಾವಣಾ ಕಾರ್ಯಗಳನ್ನು ಸುಗಮವಾಗಿ ಪ್ರಚಾರ ನಡೆಸುತ್ತಿದ್ದರು. ಬೆಂಬಲಿಗರಿಗೆ ಒಲವು ಇಲ್ಲದಿದ್ದರೂ, ಕೊನೆ ಚುನಾವಣೆ ಎಂದು ಮತದಾರರು ಹಾಗೂ ಬೆಂಬಲಿಗರಿಂದ ಅನುಕಂಪ ಗಿಟ್ಟಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದ ಸಂದರ್ಭದಲ್ಲಿಯೇ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ಹಿಂದೆ ಸರಿದಿರುವ ಬಗ್ಗೆ ಹೇಳುತ್ತಿದ್ದಂತೆ, ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸಿಟ್ಟು, ಕೋಪ, ಆತಂಕ ಹೆಚ್ಚಾಗಿದೆ.
ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ 2013ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಲೋಕಸಭೆ ಟಿಕೆಟ್ ನೀಡಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಈ ಚುನಾವಣೆಯಲ್ಲಿಯೂ ಸಹ ಇದೇ ರೀತಿ ಮತದಾನಕ್ಕೂ ಮುನ್ನ ಇದೇ ರೀತಿ ಚುನಾವಣೆಯಿಂದ ಹಿಂದೆ ಸರಿದಿದ್ದರು. ಇದನ್ನು ತೀವ್ರ ಖಂಡಿಸಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ತೀವ್ರ ಹೋರಾಟ ನಡೆಸಿ ಚುನಾವಣೆ ಮಾಡಿದ್ದರು. ಆಗ ಬಿಜೆಪಿಯೇ ಹೆಚ್ಚು ಮತ ಗಳಿಸಿದ್ದರೂ ಏಕೆ ಹೀಗೆ ಮಾಡಿದ್ದೀರಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಕ್ಷಣದಲ್ಲಿ ಎಂ. ನಾರಾಯಣಸ್ವಾಮಿ ಕಾರ್ಯಕರ್ತರಿಗೆ ಕೈಗೆ ಸಿಗದೆ ದೂರ ಉಳಿದಿರುವ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದೊಳಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.








