ವಿಧಾನ ಪರಿಷತ್ ನ ಕಲಾಪದಲ್ಲಿ ಸಂವಿಧಾನದ ಮೇಲಿನ ಚರ್ಚೆ ವೇಳೆ ಬ್ರಿಟಿಷರ ಆಳ್ವಿಕೆಯನ್ನು ಶ್ಲಾಘಿಸಿ, ಅವರಿಗೆ ಧನ್ಯವಾದ ಹೇಳಿದ ಘಟನೆ ನಡೆಯಿತು.
ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಸಂವಿಧಾನದ ಬಗ್ಗೆ ಮಾತನಾಡುತ್ತಾ ಬ್ರಿಟಿಷರಿಗೆ ಧನ್ಯವಾದ ಹೇಳಿದರು. ಬ್ರಿಟಿಷರ ಕಾಲದಲ್ಲೂ ಒಳ್ಳೆ ಕೆಲಸ ಆಗಿದೆ. ಬ್ರಿಟಿಷರ ಆಳ್ವಿಕೆ ಚೆನ್ನಾಗಿತ್ತು ಎಂದು ಶಹಬ್ಬಾಸ್ ಗಿರಿ ಕೊಟ್ಟರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ನಮ್ಮ ದೇಶದ ಮೇಲೆ ಬ್ರಿಟಿಷರು ದೌರ್ಜನ್ಯ ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳ್ತೀರಾ ಅಂತ ರಮೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೀಗೆ ಧನ್ಯವಾದ ಹೇಳಲು ಗಾಂಧೀಜಿ ಅವರು ಸ್ವಾತಂತ್ರ ತಂದು ಕೊಡಬೇಕಾಯಿತಾ? ನಾಚಿಕೆಯಾಗಬೇಕು ಎಂದು ಬಿಜೆಪಿಯ ಪ್ರಾಣೇಶ್ ರಮೇಶ್, ಪಿ.ಆರ್.ರಮೇಶ್ ವಿರುದ್ಧ ಹರಿಹಾಯ್ದರು. ಪ್ರಾಣೇಶ್ ಗೆ ಸಾಥ್ ನೀಡಿದ ಸಚಿವ ಸಿ.ಟಿ ರವಿ, ಬ್ರಿಟಿಷರನ್ನು ಹೊಗಳುವುದಕ್ಕೆ ನಾಚಿಕೆ ಆಗಬೇಕು. ಬ್ರಿಟಿಷರು ದೇಶವನ್ನು ಲೂಟಿ ಮಾಡಿ, ದಾಸ್ಯದಿಂದ ಭಾರತೀಯರನ್ನು ನಡೆಸಿಕೊಂಡವರು. ಬ್ರಿಟಿಷರಿಗೆ ಧನ್ಯವಾದ ವಿಧಾನ ಪರಿಷತ್ ನಲ್ಲಿ ಇರುವ ಗಾಂಧೀಜಿ ಫೋಟೋ ತೆಗೆದು ಲಾರ್ಡ್ ಮೆಕಾಲೆ ಫೋಟೋ ಹಾಕಿ ಎಂದು ಗುಡುಗಿದರು.
ರಮೇಶ್ ಹೇಳಿದ ಅರ್ಥ ಹಾಗಲ್ಲ. ಅವರು ಹೇಳಿದ್ದು ಬೇರೆ ಅರ್ಥದಲ್ಲಿ ಎಂದ ಕಾಂಗ್ರೆಸ್ ಸದಸ್ಯರು ಸಮಜಾಯಿಷಿ ಕೊಡಲು ಮುಂದಾದರು. ಕಾಂಗ್ರೆಸ್ ಸದಸ್ಯರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಪಿ.ಆರ್ ರಮೇಶ್ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಿದರು. ಈ ವೇಳೆ ಸದನದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಸದಸ್ಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಿ.ಆರ್.ರಮೇಶ್ ತಮ್ಮ ಹೇಳಿಕೆ ಕುರಿತು ವಿವರಣೆ ನೀಡಿದರು. ಬ್ರಿಟಿಷರು ಹಿಂದೆ ರಾಜರ ಮಧ್ಯೆ ದ್ವೇಷ ತಂದಿಟ್ಟು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಆ ಕಾಲದಲ್ಲಿ ಅವರು ವಿಷ ಬೀಜ ಬಿತ್ತಿ ನಂತರ ಅದು ಸ್ವಾತಂತ್ರ್ಯ ಎಂಬ ಅಮೃತ ತಂದು ಕೊಟ್ಟಿತ್ತು. ಸ್ವಾತಂತ್ರ್ಯ ಎಂಬ ಅಮೃತ ತಂದು ಕೊಟ್ಟಿದ್ದಕ್ಕೆ ಅವರಿಗೆ ನಾನು ಧನ್ಯವಾದ ಹೇಳಿದೆ ಅಷ್ಟೆ ಎಂದು ವಿವಾದಾತ್ಮಕ ಮಾತಿಗೆ ರಮೇಶ್ ಅಂತ್ಯ ಹಾಡಿದರು