ಬ್ರಿಟನ್ ರಾಣಿ ಎಲಿಜಬೆತ್ II ಇನ್ನಿಲ್ಲ – ಪ್ರಧಾನಿ ಮೋದಿ ಸಂತಾಪ..
ಬ್ರಿಟನ್ ರಾಣಿ ಎಲಿಜಬೆತ್ II ಇನ್ನಿಲ್ಲ. 96 ವರ್ಷದ ರಾಣಿ ಕೆಲವು ದಿನಗಳಿಂದ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಸ್ಕಾಟ್ಲೆಂಡ್‌ನ ಬಲ್ಮೋರಲ್ ಕ್ಯಾಸಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಅವರು ಗುರುವಾರ ಸಂಜೆ ನಿಧನರಾಗಿದ್ದಾರೆ.
ಎಲಿಜಬೆತ್ 2 ಅವರು ಬ್ರಿಟನ್ನಿನ ಸುದೀರ್ಘ ಸೇವೆ ಸಲ್ಲಿಸಿದ ರಾಣಿ. 1953 ರಿಂದ ಬ್ರಿಟನ್ ರಾಣಿಯಾಗಿ ಸುದೀರ್ಘ ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಒಂದು ಕಾಲದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯದ ಕ್ವೀನ್ ಎಂದು ಕರೆಯಲ್ಪಟ್ಟವಳು. ಎಲಿಜಬೆತ್ ಅತಿಹೆಚ್ಚು ಕಾಲ ಆಳಿದ ವಿಶ್ವದ ಎರಡನೇ ನಾಯಕಿ.
ಬೇಸಿಗೆ ರಜೆಗಾಗಿ ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯಿಂದ ಸ್ಕಾಟ್‌ಲ್ಯಾಂಡ್‌ನ ಬಾಲ್ಮೋರಲ್ ಕ್ಯಾಸಲ್‌ಗೆ ತೆರಳಿದ್ದ ರಾಣಿಗೆ ಆರೋಗ್ಯ ಹದಗೆಟ್ಟಿದ್ದರಿಂದ ಮತ್ತೆ ಲಂಡನ್‌ಗೆ ಬಂದಿರಲಿಲ್ಲ. ಅಧಿಕೃತ ಪ್ರವಾಸಗಳು ಮತ್ತು ಪ್ರಯಾಣವನ್ನ ರದ್ದು ಮಾಡಲಾಗಿತ್ತು.
ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಲಿಜ್ ಟ್ರಸ್ ಅವರ ಪ್ರಮಾಣವಚನ ಸಮಾರಂಭವೂ ಸಹ ಬಲ್ಮೊರಲ್ ಕ್ಯಾಸಲ್ ನಲ್ಲಿ ನಡೆಯಿತು. ಗುರುವಾರ ಬೆಳಗ್ಗೆಯಿಂದ ಅವರ ಸ್ಥಿತಿ ಚಿಂತಾಜನಕಗಿದೆ ಎಂದು ವೈದ್ಯರು ಕಳವಳವ್ಯಕ್ತ ಪಡಿಸಿದ್ದರು.
ವಯೋಸಹಜ ಕಾಯಿಲೆಗಳಿಂದ ಸೂರ್ಯ ಮುಳುಗದ ಸಾಮ್ರಾಜ್ಯದ ರಾಣಿ ಕಣ್ಮುಚ್ಚಿದ್ದಾರೆ. ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಣಿ ಎಲಿಜಬೆತ್-2 ಸಾವಿಗೆ ಕಂಬನಿ ಮಿಡಿದಿದ್ದಾರೆ.