ಮನುಷ್ಯತ್ವ ಇದ್ದರೆ ಬಿಎಸ್ ವೈ, ಈಶ್ವರಪ್ಪ ರಾಜೀನಾಮೆ ನೀಡಲಿ : ಉಗ್ರಪ್ಪ
ಬಳ್ಳಾರಿ : ಶಿವಮೊಗ್ಗ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸ್ಫೋಟಕ ವಸ್ತುವುಳ್ಳ ಲಾರಿ ಸ್ಫೋಟಗೊಂಡ ಕಾರಣ ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂವಿಧಾನದ 21ರ ಪ್ರಕಾರ ಎಲ್ಲರಿಗೂ ಬದುಕುವ ಹಕ್ಕು ಇದೆ. ಆದರೆ, ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ನೂರಾರು ಕಟ್ಟಡಗಳು ಶಿಥಿಲಗೊಂಡಿವೆ. ಈ ಘಟನೆಗೆ ಹೊಣೆ ಯಾರು.. ಎಂದು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ಗಣಿಗಾರಿಕೆ ಮಾಡೋರು ಒಂದಲ್ಲಾ ಒಂದು ರೀತಿಯಲ್ಲಿ ಬಿಜೆಪಿ ಜೊತೆ ನಂಟು ಹೊಂದಿರುತ್ತಾರೆ. ಹೀಗಾಗಿ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು.
ಘಟನೆಯನ್ನು ಹೈಕೋರ್ಟ್ ಸಿಟ್ಟಿಂಗ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು.
ಯಾವುದೇ ಅಡ್ಡಿ ಆತಂಕಗಳಿಲ್ಲದೇ ತನಿಖೆ ಸುಸೂತ್ರವಾಗಿ ನಡೆಯುವ ಸಲುವಾಗಿ ಸಿಎಂ ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel