ಶಾಸಕ ವೆಂಕಟರಾವ್ ನಾಡಗೌಡ ವಿರುದ್ಧ ಬಿಎಸ್ ವೈ ಗರಂ
ಬೆಂಗಳೂರು: ವಿಧಾನಸಭೆಯಲ್ಲಿ ಶುಕ್ರವಾರ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಶಾಸಕ ವೆಂಕಟರಾವ್ ನಾಡಗೌಡ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾಕೀತು ಮಾಡಿದ ಪ್ರಸಂಗ ನಡೆಯಿತು.
ಶುಕ್ರವಾರ ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆ ವೇಳೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಅವರು ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಅನ್ನು ಸಮರ್ಪಕವಾಗಿ ಕೊಡುತ್ತಿಲ್ಲ ಎಂದು ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿಎಸ್ ವೈ ಈಗಾಗಲೇ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವಪ್ಪಾ ಎಲ್ಲ ಕೊಟ್ಟಿಲ್ಲ ಅಂತಾ ಹೇಳಬೇಡಿ ಎಂದು ಹರಿಹಾಯ್ದರು.
ಅಲ್ಲದೇ ಸೂಕ್ತ ಬೆಂಬಲ ಬೆಲೆ ಸಿಗಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ನೂರಕ್ಕೆ ತೊಂಭತ್ತು ಭಾಗ ನಾವು ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿದ್ದೇವೆ. ಸರ್ಕಾರ ರೈತರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಆದರೆ ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ. ಅವರ ಸಮಸ್ಯೆಗಳನ್ನು ಎಲ್ಲರೂ ಸೇರಿ ಚರ್ಚೆ ಮಾಡೋಣ. ಅದರೆ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದೇ ದಯವಿಟ್ಟು ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡರು.
ಮೂರು ಹೆಚ್ಪಿ ಯಿಂದ ಎಂಟು ಹೆಚ್ಪಿ ಪಂಪ್ ಸೆಟ್ಗಳನ್ನು ಹೊಂದಿರುವ ಎಲ್ಲ ರೈತರಿಗೆ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ನಿಮಲ್ಲಿರುವ ಮಾಹಿತಿ ತಪ್ಪು. ನಿಮಗೇನಾದರೂ ಸಮಸ್ಯೆ ಇದ್ದರೆ ದಯವಿಟ್ಟು ಸ್ಪಷ್ವವಾಗಿ ಹೇಳಿ. ಯಾವುದನ್ನೂ ಗೊಂದಲಮಯವಾಗಿ ಸದನದ ಮುಂದೆ ಇಡಬೇಡಿ. ನೀವು ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸಮಸ್ಯೆಗಳನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಹೇಳಿ ಖಂಡಿತವಾಗಿ ಚರ್ಚೆ ಮಾಡೋಣ ಎಂದರು.