ದೆಹಲಿಯಿಂದ “ಅರುಣ” ಸಂದೇಶ : ಇಲ್ಲಿದೆ ದಿಢೀರ್ ಖಾತೆ ಬದಲಾವಣೆಗೆ ಕಾರಣ..!
ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವ ಬಿಜೆಪಿ ಸರ್ಕಾರ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಮೂರು ದಿನಕ್ಕೊಮ್ಮೆ ಖಾತೆ ಬದಲಾವಣೆ ಮಾಡುತ್ತಿರುವ ಸಿಎಂ ಸ್ಥಿತಿ ನೋಡಿದ್ರೆ `ಫುಟ್ ಬಾಲ್’ ನೆನಪಾಗುತ್ತಿದೆ. ಯಾರೋ ಅಸಮಾಧಾನಗೊಂಡ್ರು ಅಂತ ಒಂದು ಬಾರಿ ಖಾತೆ ಬದಲಿಸಿದ್ರೆ, ಮತ್ಯಾರೋ ಸೂಚಿಸಿದ್ರು ಅಂತ ಇನ್ನೊಮ್ಮೆ ಖಾತೆ ಬದಲಾವಣೆ ಮಾಡುತ್ತಿರುವಾಗಿದೆ. ಸಿಎಂ ಅವರ ಈ ನಡೆಗೆ ಸ್ವಪಕ್ಷದ ಸಚಿವರೇ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಮತ್ತೆ ಖಾತೆ ಅದಲು ಬದಲು
ಖಾತೆ ಹಂಚಿಕೆ ಬಳಿಕ ಸೃಷ್ಟಿಯಾಗಿರುವ ಅಸಮಾಧನ ಶಮನಕ್ಕೆ ಬಿಎಸ್ ವೈ ನಾನಾ ಸರ್ಕಸ್ ನಡೆಸುತ್ತಿದ್ದಾರೆ. ಈ ಹಿಂದೆ ಮೂವರ ಖಾತೆಗಳನ್ನ ಬದಲಿಸಿದ್ದ ಸಿಎಂ ಇದೀಗ ಮತ್ತೆ ಖಾತೆ ಹಂಚಿಕೆ ಜೇನುಗೂಡಿಗೆ ಕೈ ಹಾಕಿದ್ದಾರೆ. ಮಾಧುಸ್ವಾಮಿ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಗೆ ಹಂಚಲಾಗಿದೆ. ಆನಂದ್ ಸಿಂಗ್ ಬಳಿ ಇದ್ದ ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯನ್ನ ಮಾಧುಸ್ವಾಮಿಗೆ ನೀಡಲಾಗಿದೆ. ಇದರ ಪರಿಷ್ಕøತ ಪಟ್ಟಿ ರಾಜಭವನಕ್ಕೆ ರವಾನೆಯಾಗಿದ್ದು, ಸಂಜೆ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ.
ಸುಧಾಕರ್ ಒತ್ತಡಕ್ಕೆ ಮಣಿದ್ರಾ ಸಿಎಂ..?
ತಮ್ಮ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನ ಬೇರ್ಪಡಿಸಿ ಮಾಧುಸ್ವಾಮಿಗೆ ನೀಡಿದ್ದರಿಂದ ಸಚಿವ ಡಾ.ಕೆ.ಸುಧಾಕರ್ ಬೇಸರಗೊಂಡಿದ್ದರು. ಸಿಎಂ ನಡೆಯಿಂದ ಅಸಮಾಧಾನಗೊಂಡಿದ್ದ ಸುಧಾಕರ್, ಆರೋಗ್ಯಕ್ಕೆ ಸಂಬಂಧಿಸಿದ ಎರಡು ಖಾತೆಗಳನ್ನು ಪ್ರತ್ಯೇಕಿಸಿ ಹಂಚುವುದು ಸರಿಯಲ್ಲ. ಕೋವಿಡ್ ಲಸಿಕೆ ವಿತರಣೆ ವೇಳೆ ಈ ರೀತಿ ಮಾಡೋದು ಸೂಕ್ತವಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ಸಲ್ಲಿದ್ದರು.
ಈ ಹಿನ್ನೆಲೆ ಪಕ್ಷ ಮತ್ತು ಕೊರೊನಾವನ್ನ ಗಮನದಲ್ಲಿಟ್ಟುಕೊಂಡು ಸಿಎಂಗೆ ಕರೆ ಮಾಡಿರುವ ಅರುಣ್ ಸಿಂಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಒಬ್ಬರ ಬಳಿ ಇರಲಿ. ಒಂದು ವೇಳೆ ಈ ಎರಡು ಬೇರೆಯಾದ್ರೆ ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ಸಮಸ್ಯೆಯಾಗಲಿದೆ. ಹಾಗೇ ಇದು ಪಕ್ಷಕ್ಕೂ ಹಾನಿ ಎಂದು ಬಿಎಸ್ ವೈಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಲಹೆ ಮೇರಿಗೆ ಇಂದು ಸಿಎಂ ಮತ್ತೆ ಖಾತೆಗಳನ್ನ ಅದಲು ಬದಲು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.









