ಬೆಂಗಳೂರು: ಕೊಪ್ಪಳಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಂಪರ್ ಕೊಡುಗೆ ನೀಡಿದ್ದಾರೆ. ದೇಶದ ಪ್ರಪ್ರಥಮ ಮಕ್ಕಳ ಆಟಿಕೆಗಳ ಉತ್ಪಾದನಾ ಘಟಕ ಕೊಪ್ಪಳದಲ್ಲಿ ಆರಂಭಿಸಲಾಗುತ್ತಿದೆ ಎಂದು ಯಡಿಯೂರಪ್ಪ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಪ್ರಧಾನಿ ನರೇಂದ್ರ ಮೋದಿಯವರ ಅವರ #ವೋಕಲ್ ಫಾರ್ ಲೋಕಲ್ ಪರಿಕಲ್ಪನೆಗೆ ಅನುಗುಣವಾಗಿ ಆಟಿಕೆ ತಯಾರಿಕೆ ಮೂಲಕ ಆರ್ಥಿಕತೆ ಹಾಗು ಉದ್ಯೋಗ ಸೃಷ್ಟಿಗೆ ಬಲ ತುಂಬಲು ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಕೊಪ್ಪಳದಲ್ಲಿ ಪ್ರಾರಂಭಿಸಲಾಗುತ್ತಿದೆ. ಇಲ್ಲಿ ದೇಶ ವಿದೇಶಗಳ ಆಟಿಕೆ ತಯಾರಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂದು ಮನ್‍ಕಿ ಬಾತ್‍ನಲ್ಲಿ ಮಕ್ಕಳ ಆಟಿಕೆಗಳ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಪ್ರಧಾನಿ ಮೋದಿ ಅವರ ಮನ್ ಕಿ ಬಾತ್‍ಗೂ ಮುನ್ನವೇ ಕೊಪ್ಪಳದಲ್ಲಿ ಆಟಿಕೆಗಳ ಕ್ಲಸ್ಟರ್ ಆರಂಭಿಸಲಾಗುತ್ತಿದೆ ಎಂದು ಯಡಿಯೂರಪ್ಪ ಟ್ವಿಟರ್ ನಲ್ಲಿ ಪ್ರಕಟಿಸಿದ್ದರು.
ಕೊಪ್ಪಳದಲ್ಲಿ 400 ಎಕರೆ ಪ್ರದೇಶದಲ್ಲಿ ಆಟಿಕೆಗಳ ನಿರ್ಮಾಣಕ್ಕೆ ವಿಶೇಷ ಕೈಗಾರಿಕಾ ವಲಯ ಸ್ಥಾಪಿಸಲಾಗುತ್ತಿದೆ. ಆಟಿಕೆಗಳ ಉದ್ಯಮ ಸ್ಥಾಪನೆಗೆ ಸುಮಾರು 5000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಈ ಎಸ್‍ಇಝೆಡ್‍ನಲ್ಲಿ ಶ್ರೇಷ್ಠ ದರ್ಜೆಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮುಂಬರುವ 5 ವರ್ಷಗಳಲ್ಲಿ 40 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಆಟಿಕೆ ಘಟಕದ ವಿಶೇಷತೆಗಳು..
* 400 ಎಕರೆ ಪ್ರದೇಶದ ವಿಶೇಷ ಆರ್ಥಿಕ ವಲಯ ಸ್ಥಾಪನೆ
* 5000 ಕೋಟಿ ಬಂಡವಾಳ ಹೂಡಿಕೆ
* 40,000 ಉದ್ಯೋಗ ಸೃಷ್ಟಿಯ ಗುರಿ
* 2023ರ ವೇಳೆ 2300 ಕೋಟಿ ಬಂಡವಾಳ ಮಾರುಕಟ್ಟೆ ಗುರಿ
* ರಾಷ್ಟ್ರೀಯ ಹೆದ್ದಾರಿ 63, ಬೆಳಗಾವಿ ವಿಮಾನ ನಿಲ್ದಾಣದ ಸಂಪರ್ಕ
ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
ಆಟಿಕೆಗಳ ಉದ್ಯಮ ಆರಂಭಿಸುವಂತೆ ಮನ್ ಕಿ ಬಾತ್‍ನಲ್ಲಿ ತಾವು ನೀಡಿದ ಕರೆಗೆ ರಾಜ್ಯಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವಿಷಯ ತಿಳಿದು ನನಗೆ ಅತೀವ ಸಂತೋಷವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹಾಕಿದ್ದ ಟ್ವೀಟ್ ಟ್ಯಾಗ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









