ಬೆಳಗಾವಿ: ಕೊರೊನಾ ಹರಡುವಿಕೆಯನ್ನು ತಡೆಯಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜ್ಯದಾದ್ಯಂತ ಒಂದು ವಾರದ ಕಾಲ ಅದ್ಧೂರಿ ಮದುವೆ, ಸಾರ್ವಜನಿಕ ಸಮಾರಂಭ, ನಾಮಕರಣಗಳು ನಡೆಸದಂತೆ ಆದೇಶ ಹೊರಡಿಸಿದ್ದಾರೆ. ಅದರಂತೆ ಸಾಮಾನ್ಯ ಜನರೆಲ್ಲ ಸರ್ಕಾರದ ಆದೇಶಕ್ಕೆ ತಲೆಬಾಗಿ ತಮ್ಮ ತಮ್ಮ ವಿವಾಹ ಸಮಾರಂಭಗಳನ್ನು ಮುಂದೂಡುತ್ತಿದ್ದಾರೆ. ಆದ್ರೆ ಈ ಮಧ್ಯೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪನವರೇ ತಮ್ಮ ಆದೇಶವನ್ನು ಮರೆತು ಅದ್ಧೂರಿ ಮದುವೆಯಲ್ಲಿ ಭಾಗವಹಿಸಿದ್ದಾರೆ.
ಹೌದು..! ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಅಲ್ಲದೆ ಸಿಎಂ ಯಡಿಯೂರಪ್ಪ ಅವರ ಆದಿಯಾಗಿ ಜನಪ್ರತಿನಿಧಿಗಳಾದ ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವ ಶ್ರೀಮಂತ ಪಾಟೀಲ್, ಸಚಿವೆ ಶಶಿಕಲಾ ಜೊಲ್ಲೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಮದುವೆಗೆ ಆಗಮಿಸಿದ್ದರು.