ಮೈಸೂರು: ಕಳೆದ ವರ್ಷ ರಾಜ್ಯದಲ್ಲಿ ಎದುರಾದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೇಂದ್ರದಿಂದ ಪರಿಹಾರ ಕೇಳಲಾಗದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಫಲರಾದರು. ಆದರೆ, ಯಡಿಯೂರಪ್ಪ ಅವರನ್ನು ರಾಜಾಹುಲಿ, ವಿರಾಧಿವೀರ, ಶೂರಾಧಿಸೂರ ಎಂದೆಲ್ಲಾ ಬಿಂಬಿಸಿದರು. ಆದರೆ, ಯಡಿಯೂರಪ್ಪ ರಾಜಾಹುಲಿಯೂ ಅಲ್ಲ, ವೀರಾಧಿವೀರನೂ ಅಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯ ಎಂದು ಟೀಕಿಸಿದ್ದಾರೆ.
ಬಿಎಸ್ವೈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬರಗಾಲ, ಪ್ರವಾಹ ಹಾಗೂ ಕೊರೊನಾ ಗಂಡಾಂತರ ಎದುರಾದವು. ಒಂದು ವರ್ಷದಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಮೂರು ತಿಂಗಳು ಏಕಚಕ್ರಾಧಿಪತ್ಯ ಇತ್ತು. ಮಂತ್ರಿಗಳೇ ಇಲ್ಲದೆ ಇದ್ದರೆ ಸರ್ಕಾರ ಎಲ್ಲಿರುತ್ತೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಪ್ರವಾಹದಿಂದ 1 ಲಕ್ಷ ಕೋಟಿಗೂ ಅಧಿಕ ನಷ್ಟವಾಯಿತು. ಯಡಿಯೂರಪ್ಪ 50 ಸಾವಿರ ಕೋಟಿ ನಷ್ಟವಾಗಿದೆ ಎಂದರು. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು 1800 ಕೋಟಿ ಮಾತ್ರ. ಇಷ್ಟು ಮಟ್ಟದಲ್ಲಿ ಪ್ರವಾಹ ಬಂದರೂ ಪ್ರಧಾನಿ ಭೇಟಿ ನೀಡಲಿಲ್ಲ. ಇದನ್ನು ಸಾಧನೆ ಎನ್ನಲೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಖಾಲಿಡಬ್ಬ ಹೆಚ್ಚು ಸೌಂಡ್ ಮಾಡುತ್ತೆ..!
ತುಂಬಿದ ಕೊಡ ಎಂದೂ ತುಳುಕುವುದಿಲ್ಲ. ಯಾವಾಗಲೂ ಖಾಲಿ ಡಬ್ಬಗಳೇ ಹೆಚ್ಚು ಶಬ್ದ ಮಾಡೋದು ಎಂದು ಒಂದು ವರ್ಷ ಪೂರೈಸಿದ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಲೆಕ್ಕಕೊಡಿ ಅಭಿಯಾನ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೊರೊನಾ ಸಂದರ್ಭದಲ್ಲೇ ಮಧ್ಯಪ್ರದೇಶ ಖಾಂಗ್ರೆಸ್ ಸರ್ಕಾರವನ್ನು ಬೀಳಿಸಿದ್ದು, ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಅಲ್ಲಾಡಿಸಿದ್ದು ಸರಿನಾ ? ಇಂತಹವರಿಗೆ ಸಹಕಾರ ಕೊಡಬೇಕಾ ? ಕೊರೊನಾ ನಿಯಂತ್ರಣಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ. ಆದರೆ ಲೂಟಿ ಮಾಡುವವರಿಗೆ ನಾನು ಸಹಕಾರ ಕೊಡಲ್ಲ ಎಂದರು.