ಬೆಂಗಳೂರು : ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶದೆಲ್ಲೆಡೆ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಅವಧಿ ಏಪ್ರಿಲ್ 14ಕ್ಕೆ ಮುಕ್ತಾಯವಾಗಲಿದೆ. ಈ ಹಿನ್ನೆಲೆ ಜಾರಿಗೆ ತಂದಿರುವ ಲಾಕ್‌ಡೌನ್ ವಿಸ್ತರಣೆ ಮಾಡಬೇಕೊ ಬೇಡವೊ ಎಂಬುದನ್ನು ನಾಳೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
“ಈ ಲಾಕ್ ಡೌನ್ ಸಂದರ್ಭದಲ್ಲಿ ಜನತೆ ಮನೆಯಿಂದ ಹೊರಗೆ ಬರದೆ ಸಹಕರಿಸಬೇಕು. ಜನರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಲಿದೆ” ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ. ಇದರ ಮಧ್ಯೆ ಲಾಕ್ ಡೌನ್ ಬಗ್ಗೆ ಉತ್ತಮ ಪ್ರಜಾಕೀಯ ಪಕ್ಷದ ಮುಖಂಡ, ನಟ, ನಿರ್ದೇಶಕ ಉಪೇಂದ್ರ ಅವರು ಟ್ವೀಟ್ ಮಾಡಿ, ಸಿಎಂ ಯಡಿಯೂರಪ್ಪ ಅವರಿಗೆ ಎರಡು ಸಲಹೆ ನೀಡಿದ್ದಾರೆ.
ಟ್ವೀಟ್ ನಲ್ಲಿ ಏನಿದೆ?
” ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಂತಿ… ಎರಡರಲ್ಲಿ ಯಾವುದಾದರೂ ಒಂದನ್ನು ಮಾಡಿ.
1. ಶೇಕಡಾ ನೂರಕ್ಕೆ ನೂರು ಪ್ರತಿಶತ ಲಾಕ್ ಡೌನ್
ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆಯಿಂದ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸಿ
* ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರೇ ಸೇರುತ್ತಾರೆ.
* ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ.
2. ಜನರಿಗೆ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್ ಡೌನ್ ತೆರೆಯಿರಿ
ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ಅಂತರ ಕಾಯ್ದುಕೊಂಡು(ಸೋಷಿಯಲ್ ಡಿಸ್ಟೆನ್ಸಿಂಗ್) ಮಾಸ್ಕ್ ಧರಿಸಿ ಅವರವರ ವ್ಯವಹಾರವನ್ನು ಮುಂದುವರಿಸುವುದು.
ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರೂ (ಹೀಗೆ ನಾಯಕರು ಮಾಡಿಬಿಟ್ಟಿದ್ದಾರೆ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ.
* ಲಾಕ್ ಡೌನ್ ಮಾಡಿಕೂಡ ಜನರನ್ನು ಹಾಲು ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯುವುದು ಎಷ್ಟು ಸರಿ?
ಇಷ್ಟೆಲ್ಲ ಲಾಕ್ ಡೌನ್ ಮಾಡಿನೇ ನಮ್ ದಡ್ಡ ಜನರು ಹೀಗೆ ಇನ್ನು ಲಾಕ್ ಡೌನ್ ತೆಗೆದ್ರೆ ರೋಡ್ ರೋಡಲಿ ಹೆಣಗಳು ಬೀಳುತ್ತೆ ಅಂತ ಹೇಳುವವರಿಗೆ(ಹೆದರುವವರಿಗೆ) ಒಂದು ಕಿವಿ ಮಾತು. ಹೀಗೆ ಲಾಕ್ ಡೌನ್ ಮುಂದುವರಿಸಿದರೂ ಅದೇ ಪರಿಸ್ಥಿತಿ ಬರಬಹುದು ಯೋಚನೆ ಮಾಡಿ
ಮಲಗಿದ್ರೆ -ಸಾವು|ಕೂತಿದ್ರೆ -ರೋಗ| ನಡಿತಿದ್ರೆ-ಜೀವನ- ನಿಮ್ಮ ಉಪೇಂದ್ರ” ಎಂದು ಬರೆದುಕೊಂಡಿದ್ದಾರೆ.








