ಮಾರ್ಚ್ 5 ರಂದು ಬಜೆಟ್ : ಇಂದು ರಾಜ್ಯ ಸಚಿವ ಸಂಪುಟ ಸಭೆ
ಬೆಂಗಳೂರು : ಒಂದು ಕಡೆ ಮೀಸಲಾತಿ ಹೋರಾಟಗಳು, ಇನ್ನೊಂದು ಕಡೆ ರೈತ ಸಂಘಟನೆಗಳ ಪ್ರತಿಭಟನೆಗಳು, ಆರ್ಥಿಕ ಸಂಕಷ್ಟ. ಇವುಗಳ ಮಧ್ಯೆ ರಾಜ್ಯದ ಆಡಳಿತವನ್ನು ನಡೆಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಮುಂದಿನ ತಿಂಗಳು ಬಜೆಟ್ ಮಂಡಿಸಲು ಭಾರಿ ಸಿದ್ದತೆ ನಡೆಸುತ್ತಿದ್ದಾರೆ. ಮುಂದಿನ ತಿಂಗಳು 5 ರಂದು ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲು ತಯಾರಾಗುತ್ತಿದ್ದಾರೆ ಅನ್ನೋ ಮಾತುಗಳು ಹರಿದಾಡುತ್ತಿವೆ.

ಈ ಮಧ್ಯೆ ಇಂದು ಸಂಜೆ 5.30ಕ್ಕೆ ಸಿಎಂ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ವಿಧಾನಸೌಧದಲ್ಲಿ ನಡೆಯಲಿರುವ ಈ ಸಭೆಯಲಿ ಬಜೆಟ್ ಅಧಿವೇಶನ ದಿನಾಂಕದ ಬಗ್ಗೆ ಇಂದು ತೀರ್ಮಾನ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಸತತ 10ನೇ ದಿನವೂ ನಿಲ್ಲದ ತೈಲ ಬೆಲೆಗಳ ಓಟ : ನಮೋ ಸಮರ್ಥನೆ
ಇದಲ್ಲದೆ ವಿವಿಧ ಸಮುದಾಯ ಗಳ ಮೀಸಲಾತಿ ಬಗ್ಗೆಯೂ ನಿರ್ಧಾರ, ಯಾವ ರೀತಿ ಸಮುದಾಯದ ಬೇಡಿಕೆ ಈಡೇರಿಸಬೇಕು ಅನ್ನೋ ಚರ್ಚೆ ಕೂಡ ನಡೆಯಲಿದೆ ಎಂದು ಅಂದಾಜಿಸಲಾಗುತ್ತಿದೆ.
ರಾಜ್ಯದಲ್ಲಿ ಈಗಾಗಲೇ ಮೀಸಲಾತಿ ಹೋರಾಟಗಳು ಜೋರಾಗಿವೆ. ಇದಕ್ಕೆ ರಾಜ್ಯ ಸರ್ಕಾರದ ಸಚಿವರೇ ಮುಂದಾಳತ್ವ ವಹಿಸಿರೋದು ಸಿಎಂಗೆ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಮೀಸಲಾತಿ ಹೋರಾಟದ ಸಚಿವರುಗಳ ಜೊತೆ ಮುಖ್ಯಮಂತ್ರಿ ಇಂದು ಚರ್ಚೆ ನಡೆಯಲಿದ್ದಾರೆ. ಅದೇ ರೀತಿ ಈ ಸಭೆಯಲ್ಲಿ ಅನುದಾನ ಬಿಡುಗಡೆ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.








