ಬೆಂಗಳೂರು: ಕೊರೊನಾ ಭೀತಿ, ಕಾಂಗ್ರೆಸ್ ಬಹಿಷ್ಕಾರ, ಜೆಡಿಎಸ್ ಸಭಾತ್ಯಾಗದ ನಡುವೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯದ 2.44 ಲಕ್ಷ ಕೋಟಿ ರೂಪಾಯಿ ಬಜೆಟ್ ಗೆ ಇಂದು ವಿಧಾನಮಂಡಲದ ಅಂಗೀಕಾರ ಪಡೆದುಕೊಂಡಿದ್ದಾರೆ. ವಿಧಾನಸಭೆಯಲ್ಲಿ ಮಾರ್ಚ್ 5 ರಂದು ಸಿಎಂ ಬಿಎಸ್ ವೈ ಬಜೆಟ್ ಮಂಡಿಸಿದ್ದರು. ಇಂದು ಬಜೆಟ್ ಅಂಗೀಕಾರಕ್ಕೆ ಸಿಎಂ ಮನವಿ ಮಾಡಿದ್ದರು. ಆದ್ರೆ ಈ ವೇಳೆ ವಿಪಕ್ಷಗಳು ಸದನದಲ್ಲಿ ಹಾಜರಿರಲಿಲ್ಲ.
ಪೂರ್ಣ ಪ್ರಮಾಣದ ಬಜೆಟ್ ಗೆ ಅಂಗೀಕಾರ ಪಡೆಯುವುದು ಬೇಡ. ಕರ್ನಾಟಕದ ಎಲ್ಲಾ ಜಿಲ್ಲೆಗಳೂ ಲಾಕ್ ಡೌನ್ ಆಗಿವೆ. ನಾವು ಅಧಿವೇಶನ ನಡೆಸಿ ಚರ್ಚೆ ಮಾಡುತ್ತಾ ಕುಳಿತರೆ ತಪ್ಪು ಸಂದೇಶ ರವಾನೆಯಾಗುತ್ತದೆ.
ಹಾಗಾಗಿ ಪೂರ್ಣ ಪ್ರಮಾಣದ ಬಜೆಟ್ ಬದಲಾಗಿ ಮೂರು ತಿಂಗಳ ಲೇಖಾನುದಾನ ಪಡೆದುಕೊಳ್ಳಲಿ. ಮುಂದಿನ ದಿನಗಳಲ್ಲಿ ಬೇಕಿದ್ದರೆ ಅಧಿವೇಶನ ಕರೆದು ಬೇಡಿಕೆಗಳ ಮೇಲೆ ಸುದೀರ್ಘ ಚರ್ಚೆ ನಡೆಸಿ ಅನಂತರ ಪೂರ್ಣ ಪ್ರಮಾಣದ ಬಜೆಟ್ ಗೆ ಅಂಗೀಕಾರ ಪಡೆದುಕೊಳ್ಳಲಿ ಎಂದು ವಿರೋಧ ಪಕ್ಷಗಳ ನಾಯಕರು ನಿನ್ನೆ ಸಲಹೆ ನೀಡಿದರು.
ಆದರೆ ಇದಕ್ಕೆ ಸರ್ಕಾರ ಒಪ್ಪಿರಲಿಲ್ಲ. ಪೂರ್ಣ ಪ್ರಮಾಣದ ಬಜೆಟ್ ಗೆ ಅಂಗೀಕಾರ ಪಡೆದುಕೊಳ್ಳುತ್ತೇವೆ ಎಂದು ಪಟ್ಟು ಹಿಡಿದಿತ್ತು. ಹೀಗಾಗಿ ಕಾಂಗ್ರೆಸ್ ಒಂದು ಹೆಜ್ಜೆ ಹಿಂದೆ ಸರಿದು ಪೂರ್ಣ ಪ್ರಮಾಣದ ಬಜೆಟ್ ಗೆ ಅಂಗೀಕಾರ ಪಡೆದುಕೊಳ್ಳಿ. ಆದರೆ ಇದೇ ದಿನವೇ ಎಲ್ಲಾ ಕಲಾಪಗಳನ್ನು ಪೂರ್ಣಗೊಳಿಸಿ ಅಧಿವೇಶನ ಮುಂದೂಡಿ ಎಂದು ಮಾಡಿತ್ತು. ಆದರೆ ಇದಕ್ಕೆ ಸರ್ಕಾರ ಒಪ್ಪದ ಕಾರಣ ಕಾಂಗ್ರೆಸ್ ಇಂದು ಕಲಾಪದಲ್ಲಿ ಭಾಗವಹಿಸದೆ ಬಹಿಷ್ಕಾರ ಹಾಕಿತ್ತು.