ಬೆಂಗಳೂರು: ನಿರ್ಮಾಣ ಹಂತದ ಕಟ್ಟಡವೊಂದು ಕಣ್ಣೆದುರೇ ಕುಸಿದು ಬಿದ್ದ ಘಟನೆ ಬೆಂಗಳೂರಿನ ಗಾಂಧಿನಗರದಲ್ಲಿ ನಡೆದಿದೆ.
ಗಾಂಧಿನಗರದ ಕಪಾಲಿ ಥಿಯೇಟರ್‍ಗೆ ಸೇರಿದ ಕೆಲ ಭಾಗವನ್ನು ನೆಲಸಮ ಮಾಡಲಾಗಿದೆ. ಅದೇ ಜಾಗದಲ್ಲಿ ಶಾಪಿಂಗ್ ಮಾಲ್, ಲಾಡ್ಜ್ ಹಾಗೂ ಮಳಿಗೆಗಳ ನಿರ್ಮಾಣಕ್ಕೆ ಕಟ್ಟಡ ನಿರ್ಮಾಣ ಕಾರ್ಯ ನಡೆದಿತ್ತು.
ಚಿತ್ರಮಂದಿರದ ಜಾಗಕ್ಕೆ ಹೊಂದಿಕೊಂಡಂತೆ ಇರುವ ಪಕ್ಕದ ಜಾಗದಲ್ಲಿ ಉದ್ಯಮಿಯೊಬ್ಬರು ಲಾಡ್ಜ್‍ಗೆಂದು ಮೂರು ಅಂತಸ್ಥಿನ ಕಟ್ಟಡ ನಿರ್ಮಿಸುತ್ತಿದ್ದರು. ಕಾಮಗಾರಿ ಅಂತಿಮ ಹಂತಕ್ಕೆ ಬಂದಿತ್ತು.


ಇತ್ತೀಚೆಗೆ ಕಟ್ಟಡದ ತಳಪಾಯದಲ್ಲಿ ಸಡಿಲಿಕೆ ಕಂಡು ಬಂದಿದ್ದರಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಕಟ್ಟಡ ನೆಲಸಮ ಮಾಡಿ ಹೊಸದಾಗೊ ಕಟ್ಟಡ ನಿರ್ಮಿಸಲು ಪ್ಲಾನ್ ಮಾಡಲಾಗಿತ್ತು.
ಇದರ ನಡುವೆಯೇ ಕಳೆದ ಕಟ್ಟಡ ದಿಢೀರ್ ಕುಸಿದಿದೆ. ಕಟ್ಟಡ ಕುಸಿಯುತ್ತಿರುವುದನ್ನು ಕಂಡ ಸ್ಥಳೀಯರು ಘಟನೆಯ ದೃಷ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚಿತ್ರ ಚಿತ್ರಮಂದಿರದ ಜಾಗದಲ್ಲಿ ಕಟ್ಟಡ ನಿರ್ಮಿಸಲು ಆಳವಾದ ಪಾಯ ತೆಗೆಯಲಾಗಿದೆ. ಇದರಿಂದ ಪಕ್ಕದ ಜಾಗದಲ್ಲಿ ನಿರ್ಮಿಸುತ್ತಿದ್ದ ಕಟ್ಟಡದ ಪಾಯಕ್ಕೂ ಧಕ್ಕೆ ಆಗಿದೆ. ಇದರಿಂದಲೇ ಕಟ್ಟಡ ಕುಸಿದು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಟ್ಟಡ ಕುಸಿದು ಬೀಳುತ್ತಿದ್ದಂತೆ ಜಾಗದ ಮಾಲೀಕ ತಲೆ ಮರೆಸಿಕೊಂಡಿದ್ದು, ಇಂಜಿನಿಯರ್‍ನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.








