ಕಲಬುರಗಿ : ಟಿಕ್ ಟಾಕ್ ಹುಡುಗಿಗಾಗಿ ಪುಂಡ ಪೋಕರಿಗಳು ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯ ಶಿವಾಜಿ ನಗರ ಪಾರ್ಕ್ ನಲ್ಲಿ ನಡೆದಿದೆ. ಸುರಪುರದ ಭೀಮನಗೌಡ ಹಲ್ಲೆಗೊಳಗಾದ ಯುವಕನಾಗಿದ್ದು, ಅಮರ್, ಚೇತನ್ ಅಂಡ್ ಗ್ಯಾಂಗ್ ಭೀಮನಗೌಡ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ತಾವೇ ಹಲ್ಲೆಯ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಟಿಕ್ ಟಾಕ್ ಚೆಲುವೆಗೆ ಕಳಿಸಿದ್ದಾರೆ. ಈ ಘಟನೆ ಲಾಕ್ ಡೌನ್ ಗೂ ಮುನ್ನ ನಡೆದಿದ್ದು, ಈಗ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗುತ್ತಿದೆ.
ನಡೆದಿದ್ದೇನು?
ಸುರಪುರದ ಭೀಮನಗೌಡ ಎಂಬ ಯುವಕನಿಗೆ ಟಿಕ್ ಟಾಕ್ ನಲ್ಲಿ ಯುವತಿ ಒಬ್ಬಳ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಹಾಗೇ ಒಂದು ದಿನ ಟಿಕ್ ಟಾಕ್ ಗೆಳತಿಯನ್ನು ಮಾತನಾಡಿಸಲು ಭೀಮನಗೌಡ ಮುಂದಾಗಿದ್ದಾನೆ. ಇದನ್ನು ನೋಡಿದ ಸುಂದರಿಗೆ ಪ್ರೇಮ ಬಲೆ ಬೀಸುತ್ತಿದ್ದ ಅಮರ್ ಮತ್ತು ಚೇತನ್ ಕೋಪ ನೆತ್ತಿಗೇರಿದೆ.
ಭೀಮನಗೌಡನಿಗೆ ಒಂದು ಗತಿ ಕಾಣಿಸಬೇಕೆಂದು ನಿರ್ಧರಿಸಿದ ಅಮರ್ ಮತ್ತು ಚೇತನ್, ತಮ್ಮ ಕೆಲ ಪುಡಿರೌಡಿಗಳ ಸಹಾಯದಿಂದ ಭೀಮನಗೌಡನನ್ನು ನಗರದ ಶಿವಾಜಿ ಪಾರ್ಕ್ ಗೆ ಎತ್ತಿಕೊಂಡು ಹೋಗಿ ಸಿನಿಮಾ ಶೈಲಿಯಲ್ಲಿ ಥಳಿಸಿದ್ದಾರೆ. ಹಲ್ಲೆಯ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಟಿಕ್ ಟಾಕ್ ಗೆಳತಿಗೆ ಕಳುಹಿಸಿ, ನಿನ್ನನ್ನು ನಾನಷ್ಟೇ ನೋಡಬೇಕು. ಬೇರೆಯವರು ನೋಡುವ ಹಾಗಿಲ್ಲ ಎಂದು ಸಂದೇಶವನ್ನು ಕಳುಹಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಟೀಕೆಗೆ ಒಳಗಾಗುತ್ತಿದೆ.








