ನವದೆಹಲಿ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ದೇಶದ ಲಕ್ಷಾಂತರ ಯುವಜನತೆಗೆ ಭಾರತೀಯ ಅಂಚೆ ಇಲಾಖೆಯು (India Post) ಸಿಹಿ ಸುದ್ದಿಯೊಂದನ್ನು ನೀಡಿದೆ. ಯಾವುದೇ ಕಠಿಣ ಲಿಖಿತ ಪರೀಕ್ಷೆಗಳಿಲ್ಲದೇ, ಕೇವಲ ಹತ್ತನೇ ತರಗತಿಯ ಅಂಕಗಳ ಆಧಾರದ ಮೇಲೆ ಬರೋಬ್ಬರಿ 28,740 ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಸಜ್ಜಾಗಿದೆ.
ದೇಶಾದ್ಯಂತ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗಾಗಿ ಅಂಚೆ ಇಲಾಖೆಯು ಬೃಹತ್ ಅಧಿಸೂಚನೆಯನ್ನು ಹೊರಡಿಸಲು ಸಿದ್ಧತೆ ನಡೆಸಿದ್ದು, ಜನವರಿ 31 ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.
ಪರೀಕ್ಷೆಯಿಲ್ಲದೆ ಸರ್ಕಾರಿ ನೌಕರಿ ಪಡೆಯಲು ಸುವರ್ಣಾವಕಾಶ
ಸಾಮಾನ್ಯವಾಗಿ ಸರ್ಕಾರಿ ಕೆಲಸ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅಂಚೆ ಇಲಾಖೆಯ ಈ ನೇಮಕಾತಿಯ ವಿಶೇಷವೇನೆಂದರೆ, ಇಲ್ಲಿ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು 10ನೇ ತರಗತಿಯಲ್ಲಿ (SSLC) ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ನೇರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದು ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ ಪಡೆಯಲು ಅತ್ಯುತ್ತಮ ಅವಕಾಶವಾಗಿದೆ.
ನೇಮಕಾತಿಯ ಪ್ರಮುಖ ವಿವರಗಳು
ಒಟ್ಟು ಹುದ್ದೆಗಳು: ಅಂದಾಜು 28,740 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.
ಹುದ್ದೆಗಳ ವಿವರ:
1. ಗ್ರಾಮೀಣ ಡಾಕ್ ಸೇವಕ್ (GDS)
2. ಬ್ರಾಂಚ್ ಪೋಸ್ಟ್ ಮಾಸ್ಟರ್ (BPM)
3. ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM)
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM): ರೂ. 12,000 ದಿಂದ ರೂ. 29,380 ರವರೆಗೆ.
ABPM ಮತ್ತು GDS: ರೂ. 10,000 ದಿಂದ ರೂ. 24,470 ರವರೆಗೆ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು ಹಾಗೂ ಸ್ಥಳೀಯ ಭಾಷೆಯ ಜ್ಞಾನ ಅತ್ಯಗತ್ಯ.
ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಗಳ ಅನ್ವಯ ಎಸ್ಸಿ, ಎಸ್ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕವಿದ್ದು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಅಂಗವಿಕಲರು (PWD) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಪ್ರಮುಖ ದಿನಾಂಕಗಳು (2026)
ಅಧಿಸೂಚನೆ ಪ್ರಕಟ ಮತ್ತು ಅರ್ಜಿ ಆರಂಭ: ಜನವರಿ 31, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 14, 2026
ಮೆರಿಟ್ ಪಟ್ಟಿ ಬಿಡುಗಡೆ: ಫೆಬ್ರವರಿ 28, 2026
ಅರ್ಜಿ ಸಲ್ಲಿಸುವುದು ಹೇಗೆ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಜನವರಿ 31 ರಂದು ಲಿಂಕ್ ಸಕ್ರಿಯವಾಗಲಿದ್ದು, ಫೆಬ್ರವರಿ 14 ರ ಒಳಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಅಂದರೆ ಫೆಬ್ರವರಿ 28 ರಂದೇ ಮೆರಿಟ್ ಪಟ್ಟಿ ಬಿಡುಗಡೆಯಾಗಲಿದ್ದು, ನೇಮಕಾತಿ ಪ್ರಕ್ರಿಯೆ ತ್ವರಿತವಾಗಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ಅಧಿಕೃತ ವೆಬ್ಸೈಟ್ ಅನ್ನು ಗಮನಿಸಬಹುದಾಗಿದೆ.








