ಸಾರಿಗೆ ನೌಕರರಿಗೆ ಬಂಪರ್ ಆಫರ್ 7200 ನೌಕರರ ಶಿಸ್ತು ಪ್ರಕರಣ ಮನ್ನಾ…
ಕಾರ್ಮಿಕ ದಿನಾಚರಣೆ ಪ್ರಯುಕ್ತ ಕೆ ಎಸ್ ಆರ್ ಟಿ ಸಿ ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ ಮಾಡಲಾಗಿದೆ.
ಹತ್ತು ತಿಂಗಳುಗಳ ಅವಧಿಗಿಂತ ಕಡಿಮೆ ಅವಧಿಯ ಒಳಗಿನ ಗೈರುಹಾಜರಿಯನ್ನು ಮನ್ನಿಸಿ, ಕರ್ತವ್ಯಕ್ಕೆ ಹಾಜರಾಗುವ ನೌಕರರ ವಿಚಾರಣೆಯನ್ನು ರದ್ದುಗೊಳಿಸಿ, ಬಸ್ಸನ್ನು ನೀಡಿ ಚಾಲನೆಗೆ ಅನುವು ಮಾಡಿಕೊಡಲಾಗಿದೆ.
ಒಟ್ಟು 35,000, ಕೆಎಸ್ ಆರ್ ಟಿ ಸಿ ನಿಗಮದ ಸಿಬ್ಬಂದಿಗಳಿಂದು ಅದರಲ್ಲಿ ಒಟ್ಟು 8,414 ಶಿಸ್ತು ಪ್ರಕರಣಗಳಿವೆ. ಕಳೆದ ಮೂರು ದಿನಗಳಿಂದ 7,200 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ಅಂದರೆ, ರೂ.100, ರೂ 200, ಗರಿಷ್ಠ ರೂ.500 ಅನ್ನು ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಈ ಪ್ರಕರಣಗಳಿಗೆ ಕನಿಷ್ಠವೆಂದರೆ ರೂ.25,000 ದಂಡ ವಿಧಿಸಬಹುದಾದ ಪ್ರಕರಣ ಗಳಾಗಿದ್ದವು.
ವ್ಯವಸ್ಥಾಪಕ ನಿರ್ದೇಶಕರು , ಶಿಸ್ತು ಪ್ರಕರಣಗಳನ್ನು ಮುಕ್ತಾಯಗೊಂಡಿರುವ ನೌಕರರಿಗೆ ಆದೇಶದ ಪ್ರತಿಯನ್ನು ಸಿಹಿಯೊಂದಿಗೆ ವಿತರಿಸಿ ಶುಭ ಕೋರಿದರು.
ಆಡಳಿತ ವರ್ಗ ಅಂದರೆ ಶಿಕ್ಷೆ ಕೊಡುವುದು ಮಾತ್ರವಲ್ಲ, ನೌಕರರ ಶ್ರೇಯೋಭಿವೃದ್ದಿಯಾಗಿ ದುಡಿಯುವುದು ಕೂಡ ನಮ್ಮ ಕರ್ತವ್ಯವಾಗಿರಬೇಕು. ಆದರೆ ನೌಕರರು ಮತ್ತೊಮ್ಮೆ ಅಪರಾಧ/ ಅಪಘಾತ/ ಗೈರು ಹಾಜರಿ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.
ನಿಗಮದ ಪ್ರತಿದಿನದ ಸರಾಸರಿ ಆದಾಯ 10 ಕೋಟಿ ಇರಬೇಕು. ಆದರೆ ನಮಗೆ ಸರಾಸರಿ 8 ಕೋಟಿ ಮಾತ್ರ ಬರುತ್ತಿದೆ, ಇದರಲ್ಲಿ 70% ಡೀಸೆಲ್ ಪಾವತಿಗೆ ಸಂದಾಯ ಮಾಡಬೇಕಾಗಿದೆ. ಆದ್ದರಿಂದ ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾದ ಸ್ಥಿತಿಯಲ್ಲಿದೆ. ನಮ್ಮ ನೌಕರರು ಸಹ ನಮ್ಮ ಸಾರಿಗೆ ಸೇವೆಯನ್ನು ಬಲಪಡಿಸಿ, ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ನಮ್ಮೊಡನೆ ಕೈಜೋಡಿಸಬೇಕು, ಆಗ ಮಾತ್ರ ಸಂಸ್ಥೆ ಇನ್ನೂ ಬೆಳವಣಿಗೆ ಕಾಣಲು ಸಾಧ್ಯ ಎಂದು ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್ ಹೇಳಿದರು..