Asia Cup: ಬುಮ್ರಾ ಹಾಗೂ ರಾಹುಲ್ ಟೀಂ ಇಂಡಿಯಾದ ಕಮ್‌ಬ್ಯಾಕ್ ಕಿಂಗ್‌ಗಳು
ಗಾಯದ ಸಮಸ್ಯೆಯ ಕಾರಣದಿಂದಾಗಿ ಹಲವು ತಿಂಗಳುಗಳ ಕಾಲ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಸ್ಟಾರ್ ಪ್ಲೇಯರ್‌ಗಳಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ವಿಕೆಟ್-ಕೀಪರ್ ಬ್ಯಾಟರ್ ಕೆಎಲ್ ರಾಹುಲ್, ಭಾರತ ತಂಡಕ್ಕೆ ಬಲಿಷ್ಠ ಕಮ್‌ಬ್ಯಾಕ್ ಮಾಡಿದ್ದಾರೆ.
ಏಷ್ಯಾಕಪ್ ಆರಂಭಕ್ಕೂ ಮುನ್ನ ನಡೆದ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಮೂಲಕ ಭಾರತ ತಂಡಕ್ಕೆ ಮರಳಿದ ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಿದರು. ತಂಡಕ್ಕೆ ಮರಳುವ ಜೊತೆಗೆ ನಾಯಕತ್ವದ ಜವಾಬ್ದಾರಿಯನ್ನು ಸಹ ಯಶಸ್ವಿಯಾಗಿ ನಿರ್ವಹಿಸಿದ ಬುಮ್ರಾ, ಆ ಮೂಲಕ ಕಮ್‌ಬ್ಯಾಕ್ ಸರಣಿಯಲ್ಲೇ ತಮ್ಮ ಮೇಲಿದ್ದ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿದರು.
ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್‌ನಲ್ಲೂ ಪರಿಣಾಮಕಾರಿ ಬೌಲಿಂಗ್ ಮೂಲಕ ತಂಡಕ್ಕೆ ಆಸರೆಯಾಗಿರುವ ಬುಮ್ರಾ, ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 1 ವಿಕೆಟ್ ಪಡೆದರೆ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಪಡೆದು ತಂಡದ ಗೆಲುವಿಗೆ ತಮ್ಮದೇ ಕಾಣಿಕೆ ನೀಡಿದರು. ಹೀಗಾಗಿ ಭರ್ಜರಿ ಫಾರ್ಮ್‌ನಲ್ಲಿರುವ ಜಸ್ಪ್ರೀತ್ ಬುಮ್ರಾ, ಇದೀಗ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಮತ್ತೊಂದೆಡೆ ಕನ್ನಡಿಗ ಕೆಎಲ್ ರಾಹುಲ್ ಕೂಡ ಬಲಿಷ್ಠ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸಕ್ತ ವರ್ಷದ ಐಪಿಎಲ್ ವೇಳೆ ಗಾಯಗೊಂಡ ಪರಿಣಾಮ ತಿಂಗಳುಗಳ ತಂಡದಿಂದ ಹೊರಗುಳಿದಿದ್ದ ರಾಹುಲ್, ಟೀಂ ಇಂಡಿಯಾಕ್ಕೆ ವಾಪಸ್ಸಾಗುವ ನಿಟ್ಟಿನಲ್ಲಿ ಕಠಿಣ ಪ್ರಯತ್ನ ನಡೆಸಿದ್ದರು. ಅದರಂತೆ ಏಷ್ಯಾಕಪ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದ ರಾಹುಲ್, ಸಂಪೂರ್ಣವಾಗಿ ಫಿಟ್ ಆಗದ ಪರಿಣಾಮ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು.
ಈ ನಡುವೆ ಕೆಎಲ್ ರಾಹುಲ್ ಆಯ್ಕೆ ಕುರಿತಂತೆ ಸಾಕಷ್ಟು ಚರ್ಚೆಗಳು ಸಹ ನಡೆದಿತ್ತು. ಆದರೆ ಸೂಪರ್-4 ಹಂತದ ವೇಳೆ ತಂಡಕ್ಕೆ ಮರಳಿದ ರಾಹುಲ್, ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಬಲಿಷ್ಠ ಕಮ್‌ಬ್ಯಾಕ್ ಮಾಡಿದರು. ಬಳಿಕ ಶ್ರೀಲಂಕಾ ವಿರುದ್ದದ ಪಂದ್ಯದಲ್ಲೂ 39 ರನ್‌ಗಳ ಉಪಯುಕ್ತ ರನ್ ಕಲೆಹಾಕಿ ತಂಡಕ್ಕೆ ಆಸರೆಯಾಗಿದ್ದರು. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್‌ನಲ್ಲೂ ಫಿಟ್ ಆಗಿರುವ ರಾಹುಲ್, ಸದ್ಯ ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲೂ ಅತ್ಯುತ್ತಮ ಆಟವಾಡುವ ನಿರೀಕ್ಷೆಯಲ್ಲಿದ್ದಾರೆ.








