ಬೆಂಗಳೂರು: ರಾಜ್ಯದ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ತಾಣವಾಗಿರುವ ಕರಾವಳಿ ಕರ್ನಾಟಕದಲ್ಲಿ (ದಕ್ಷಿಣ ಕನ್ನಡ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಕೋಮುವಾದ ಮತ್ತು ಅಸಹಿಷ್ಣುತೆಯ ವಾತಾವರಣವು ಆ ಭಾಗದ ಆರ್ಥಿಕ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ತಲೆಧೋರಿರುವ ವಿಷಮ ವಾತಾವರಣದಿಂದಾಗಿ ಜಾಗತಿಕ ಮಟ್ಟದ ಐಟಿ-ಬಿಟಿ ಕಂಪನಿಗಳು ಅಲ್ಲಿ ಬಂಡವಾಳ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿವೆ ಎಂಬ ಆಘಾತಕಾರಿ ಸತ್ಯವನ್ನು ಬಿಚ್ಚಿಟ್ಟರು.
ಉದ್ಯೋಗಿಗಳ ಸುರಕ್ಷತೆಯೇ ಕಂಪನಿಗಳ ಪ್ರಮುಖ ಚಿಂತೆ
ನಾವು ಮಂಗಳೂರು ಮತ್ತು ಕರಾವಳಿಯ ಇತರ ಭಾಗಗಳಲ್ಲಿ ಉದ್ಯಮ ಸ್ಥಾಪಿಸಲು ಅಂತಾರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಿದಾಗ, ಅವರು ಹೂಡಿಕೆಗೆ ಸಿದ್ಧರಿರುತ್ತಾರೆ. ಮೂಲಭೂತ ಸೌಕರ್ಯಗಳ ಬಗ್ಗೆ ಅವರಿಗೆ ತಕರಾರಿಲ್ಲ. ಆದರೆ, ಅಲ್ಲಿನ ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಅವರು ಆತಂಕಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೋಮು ಗಲಭೆಗಳು ಅಥವಾ ನೈತಿಕ ಪೊಲೀಸ್ ಗಿರಿಯಂತಹ ಘಟನೆಗಳು ನಡೆದರೆ, ತಮ್ಮ ಸಿಬ್ಬಂದಿಗೆ ತೊಂದರೆಯಾಗಬಹುದು ಎಂಬ ಭಯ ಅವರಲ್ಲಿದೆ. ಉದ್ಯೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಅವರು ಕರಾವಳಿಯ ಬದಲಿಗೆ ಬೇರೆಡೆ ಹೂಡಿಕೆ ಮಾಡಲು ಇಚ್ಛಿಸುತ್ತಿದ್ದಾರೆ ಎಂದು ಸಚಿವರು ವಿವರಿಸಿದರು.
ಧರ್ಮಗುರುಗಳು ಮತ್ತು ರಾಜಕಾರಣಿಗಳ ಜವಾಬ್ದಾರಿ
ಸಮಾಜದಲ್ಲಿ ಶಾಂತಿ ನೆಲೆಸುವಲ್ಲಿ ಧಾರ್ಮಿಕ ಮುಖಂಡರು ಮತ್ತು ಜನಪ್ರತಿನಿಧಿಗಳ ಪಾತ್ರ ಹಿರಿದು ಎಂದ ಖರ್ಗೆ, ಧರ್ಮಗುರುಗಳು ಮತ್ತು ರಾಜಕಾರಣಿಗಳು ಪ್ರಬುದ್ಧವಾಗಿ ಮತ್ತು ಜವಾಬ್ದಾರಿಯುತವಾಗಿ ಮಾತನಾಡುವವರೆಗೂ ಸಮಾಜದ ಉದ್ಧಾರ ಕಷ್ಟಸಾಧ್ಯ. ಕೇವಲ ಧರ್ಮದ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ದ್ವೇಷದ ವಾತಾವರಣ ನಿಲ್ಲಬೇಕು. ಅಶಾಂತಿ ಇದ್ದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಅದಮಾರು ಮಠದ ವಿದ್ಯಾರ್ಥಿ ನಾನು
ಇದೇ ವೇಳೆ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮತ್ತು ಶಿಕ್ಷಣದ ಬಗ್ಗೆ ಟೀಕೆ ಮಾಡುವವರಿಗೂ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು. ನನ್ನ ವಿರೋಧಿಗಳು ನಾನು ಪಾಶ್ಚಾತ್ಯ ಸಂಸ್ಕೃತಿಯ ಕಾನ್ವೆಂಟ್ ಶಾಲೆಯಲ್ಲಿ ಓದಿದವನು ಎಂದು ತಪ್ಪಾಗಿ ಪ್ರಚಾರ ಮಾಡುತ್ತಾರೆ. ಆದರೆ, ನಾನು ಅಪ್ಪಟ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೆಸರಾದ ಅದಮಾರು ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂಬ ವಿಷಯ ಅವರಿಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಂತಿಮವಾಗಿ, ಧರ್ಮ ಇರುವುದು ಮನುಷ್ಯನಿಗಾಗಿಯೇ ಹೊರತು, ಮನುಷ್ಯ ಇರುವುದು ಧರ್ಮಕ್ಕಾಗಿ ಅಲ್ಲ. ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂದು ಹೇಳುವ ಮೂಲಕ ಕರಾವಳಿಯಲ್ಲಿ ಸಾಮರಸ್ಯದ ಅಗತ್ಯವನ್ನು ಪ್ರತಿಪಾದಿಸಿದರು.








