ಮುಂಬೈ: ಹೌದು, ಯಾರದೊ ದುದ್ದು ಎಲ್ಲಮ್ಮನ ಜಾತ್ರೆ ಅಂತಾರಲ್ಲ.. ಹಾಗಾಗಿದೆ ಮಹಾರಾಷ್ಟ್ರ ಸರ್ಕಾರದ ಸ್ಥಿತಿ.
ಒಂದೆಡೆ ಕೊರೊನಾ ಸಂಕಷ್ಟ, ಮತ್ತೊಂದೆಡೆ ಸತತ ಮೂರೂವರೆ ತಿಂಗಳ ಲಾಕ್‌ಡೌನ್‌ನಿಂದ ಮಹಾರಾಷ್ಟ್ರ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದೆ. ಇದರ ನಡುವೆಯೇ ಇಲ್ಲಿನ ಶಿಕ್ಷಣ ಮತ್ತು ಕ್ರೀಡಾ ಸಚಿವರು ಹಾಗೂ ಅಧಿಕಾರಿಗಳಿಗಾಗಿ 1.37 ಕೋಟಿ ಖರ್ಚು ಮಾಡಿ ಹೊಸ ಆರು ಕಾರು ಖರೀದಿ ಮಾಡಿದ್ದಾರೆ.
ಸಚಿವರು ಹಾಗೂ ಅಧಿಕಾರಿಗಳ ಕಾರು ಖರೀದಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಹಿ ಹಾಕಿದ್ದಾರೆ. 1.37 ಕೋಟಿ ವೆಚ್ಚದಲ್ಲಿ 6 ಇನೋವಾ ಕ್ರಿಸ್ಟಾ ಹೈಎಂಡ್ ಕಾರುಗಳನ್ನು ಖರೀದಿ ಮಾಡಿದ್ದಾರಂತೆ.
ಮಹಾರಾಷ್ಟ್ರ ಲಾಕ್‌ಡೌನ್‌ನಿಂದಾಗಿ 50 ಸಾವಿರ ಕೋಟಿಗೂ ಅಧಿಕ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಹೆಣಗಾಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ 1.37 ಕೋಟಿ ಖರ್ಚು ಮಾಡಿ ಕಾರು ಖರೀದಿ ಮಾಡಬೇಕಿತ್ತೇ ಎಂಬ ಪ್ರಶ್ನೆ ಎದ್ದಿದೆ.
ಮಹಾರಾಷ್ಟ್ರದ ಕ್ರೀಡಾ ಸಚಿವ ಸುನಿಲ್ ಕೆದಾರ್ ಹಾಗೂ ಅವರ ರಾಜ್ಯ ಸಚಿವ ಅದಿಥಿ ಠಾಕ್ರೆ, ಶಿಕ್ಷಣ ಸಚಿವೆ ವರ್ಷಾ ಗಾಯಕ್‌ವಾಡ್, ಅವರ ರಾಜ್ಯ ಸಚಿವ ಬಚ್ಚು ಕಡು, ಶಿಕ್ಷಣ ಹಾಗೂ ಕ್ರೀಡಾ ಇಲಾಖೆಗಳ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗಾಗಿ ಹೊಸ ಕಾರು ಖರೀದಿ ಮಾಡಿದ್ದಾರೆ.
ಸರ್ಕಾರ ಎಂದ ಮೇಲೆ ನೂರಾರು ಕಾರುಗಳು ಇದ್ದೇ ಇರುತ್ತವೆ. ಕೊರೊನಾ ಸಂಕಷ್ಟ ಮುಗಿಯುವವರೆಗೆ ಇರುವ ಕಾರುಗಳನ್ನು ಬಳಸಿಕೊಳ್ಳಬಹುದಿತ್ತಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎನ್ನಲಾಗಿದೆ.