ಐಪಿಎಲ್ 2020 ಪ್ರಾಯೋಜಕತ್ವ – ಬೈಜೂ ಮತ್ತು ಕೋಕಾ ಕೋಲಾ ನಡುವೆ ಸ್ಪರ್ಧೆ ?
ವಿಶ್ವ ಕ್ರಿಕೆಟ್ ನ ಕುಬೇರ ಬಿಸಿಸಿಐಗೆ ಈಗ ಪ್ರಾಯೋಜಕತ್ವದ ಮಂಡೆ ಬಿಸಿ ಶುರುವಾಗಿದೆ. ಚೀನಾ ಮೂಲದ ವಿವೋ ಮೊಬೈಲ್ ಕಂಪೆನಿಯ ಜೊತೆಗಿನ 2020ರ ಐಪಿಎಲ್ ಪ್ರಾಯೋಜಕತ್ವವನ್ನು ಬಿಸಿಸಿಐ ಸದ್ಯಕ್ಕೆ ಸ್ಥಗಿತಗೊಳಿಸಿದೆ. ಇದ್ರಿಂದ ಬಿಸಿಸಿಐಗೆ ಸುಮಾರು 444 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಚೀನಾ ಕಂಪೆನಿಯ ಪ್ರಾಯೋಜಕತ್ವದಲ್ಲಿ ಐಪಿಎಲ್ ಟೂರ್ನಿಯನ್ನು ಸಂಘಟಿಸಿದ್ರೆ ಭಾರತದಲ್ಲಿ ಐಪಿಎಲ್ ಬ್ಯಾನ್ ಮಾಡಬೇಕಾಗುತ್ತದೆ ಎಂದು ಸ್ವದೇಶಿ ಜಾಗೃತ್ ಮಂಚ್ ಎಚ್ಚರಿಕೆಯನ್ನು ನೀಡಿತ್ತು. ಅಲ್ಲದೆ ಸಾಮಾಜಿಕ ಜಾಲ ತಾಣದಲ್ಲೂ ವ್ಯಾಪಕ ಟೀಕೆಗಳು ಎದುರಾಗಿದ್ದವು. ಹೀಗಾಗಿ ಬಿಸಿಸಿಐ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವುದು ಗೊತ್ತಿರುವ ವಿಚಾರವೇ.
ಗಾಲ್ವಾನ್ ನಲ್ಲಿ ಚೀನಿ ಸೈನಿಕರ ಗುಂಡಿನ ದಾಳಿಗೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಇದಾದ ನಂತರ ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡುವ ಅಭಿಯಾನ
ಶುರುವಾಗಿತ್ತು. ಹಾಗೇ ಭಾರತ ಸರ್ಕಾರ ಚೀನಾದ 60ಕ್ಕೂ ಹೆಚ್ಚು ಆಪ್ ಗಳನ್ನು ನಿಷೇಧಿಸಿತ್ತು. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಚೀನಿ ಕಂಪೆನಿಗಳಿಗೆ ಪ್ರವೇಶವಿಲ್ಲ.
ಇದೀಗ ಬಿಸಿಸಿಐ ಹೊಸ ಪ್ರಾಯೋಜಕರನ್ನು ಎದುರು ನೋಡುತ್ತಿದೆ. ಮೂಲಗಳ ಪ್ರಕಾರ ಕೋಕಾ ಕೋಲಾ ಇಂಡಿಯಾ ಮತ್ತು ಎಡ್ಟೆಕ್ ಕಂಪೆನಿ ಬೈಜು ಈ ವರ್ಷದ ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸುವ ಸಾಧ್ಯತೆ ಇದೆ. ಬೈಜು ಕಂಪೆನಿಯು ಈಗಾಗಲೇ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಹಾಗೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೂ ಪ್ರಾಯೋಜಕತ್ವ ನೀಡಿದೆ. ಅಲ್ಲದೆ ಕೆಕೆಆರ್ ತಂಡದ ಮಾಲೀಕರಾಗಿರುವ ಶಾರೂಕ್ ಖಾನ್ ಬೈಜು ಆಪ್ಗೆ ರಾಯಭಾರಿ ಕೂಡ ಆಗಿದ್ದಾರೆ. ಈ ನಡುವೆ ಬಿಸಿಸಿಐ ಜೊತೆ ಮಾತುಕತೆ ಕೂಡ ನಡೆಸುತ್ತಿದೆಯಂತೆ. ಆದ್ರೆ ಬೈಜು ಕಂಪೆನಿ ಐಪಿಎಲ್ ಪ್ರಾಯೋಜಕತ್ವದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇನ್ನೊಂದೆಡೆ ಕೋಕಾ ಕೋಲಾ ಕಂಪೆನಿಯು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ನಾವು ಕ್ರಿಕೆಟ್ ನಲ್ಲಿ ಹೂಡಿಕೆ
ಮಾಡುವುದನ್ನು ಮುಂದುವರಿಸುತ್ತೇವೆ. ಪರಿಸ್ಥಿತಿಯನ್ನು ಎದುರು ನೋಡುತ್ತಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.
ಐಪಿಎಲ್ ಪ್ರಾಯೋಜಕತ್ವಕ್ಕೆ ಹೊಸ ಬಿಡ್ಡಿಂಗ್ಗೆ ಆಹ್ವಾನ
ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲವೇ ಕೆಲವು ದಿನಗಳಲ್ಲಿ ಬಿಸಿಸಿಐ ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ಡಿಂಗ್ ಆಹ್ವಾನ ನೀಡಲಿದೆ. ಟೆಂಡರ್ ಪ್ರಕ್ರಿಯೆ ಮೂಲಕ ಬಿಡ್ಗಳನ್ನು ನಡೆಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇನ್ನು ವಿವೋ ಕಂಪೆನಿಯು 2017ರಲ್ಲಿ ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿಕೊಂಡಿತ್ತು. ವಾರ್ಷಿಕವಾಗಿ ಬಿಸಿಸಿಐಗೆ ವಿವೋ ಕಂಪೆನಿಯು 444 ಕೋಟಿ ರೂಪಾಯಿ ನೀಡುತ್ತಿತ್ತು. ಇದೀಗ ಒಪ್ಪಂದ ಮುರಿದು ಬಿದ್ದಿದೆ. ಹೀಗಾಗಿ ಬಿಸಿಸಿಐ ಕೋವಿಡ್ 19 ನಿಂದಾಗಿ ಹೊಸ ಪ್ರಾಯೋಜಕರನ್ನು ಹುಡುಕುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.








