ಲವ್ ಇಲ್ದೇನೇ ಮದುವೆ ಆಗ್ತಾರಾ? : ಇಬ್ರಾಹಿಂ ಪ್ರಶ್ನೆ C M Ibrahim saaksha tv
ಬೆಂಗಳೂರು : ಮತಾಂತರ ನಿಷೇಧ ಮಸೂದೆಯಲ್ಲಿ ಲವ್ ಜಿಹಾದ್ ಸೇರ್ಪಡೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ “ಮದುವೆಯಾಗೋರು ಲವ್ ಇಲ್ದೇನೇ ಮದುವೆ ಆಗ್ತಾರಾ? ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಯಾವುದ್ರೀ ಲವ್, ಯಾವುದ್ರೀ ಜಿಹಾದ್ ಎಂದು ತಮ್ಮದೇಯಾದ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಮದುವೆಯಾಗೋರು ಲವ್ ಇಲ್ದೇನೇ ಮದುವೆ ಆಗ್ತಾರಾ..? ಲವ್ ಇರೋದ್ರಿಂದಾನೇ ಮದುವೆ ಆಗೋದು. ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ವಿಧಾನ ಪರಿಷತ್ ನ ವಿಪಕ್ಷ ಸ್ಥಾನಕ್ಕೆ ಬೇಡಿಕೆ ವಿಚಾರವಾಗಿ ಮಾತನಾಡಿ, ಯೌವ್ವನದಲ್ಲಿ ಮದುವೆಯಾಗಲ್ಲ ಅಂತ ಹೇಳೋರು ಯಾರಿದ್ದಾರೆ ಹೇಳಿ? ನನಗೀಗ ಪರಿಷತ್ ನಲ್ಲಿ ಯೌವ್ವನ ತುಂಬಿದೆ. ನೋಡೋಣ, ಅದರ ಬಗ್ಗೆ ಪಕ್ಷದ ನಿರ್ಧಾರಕ್ಕೆ ಬಿಟ್ಟಿದೀನಿ ಎಂದು ಹೇಳಿದ್ದಾರೆ. ಅಲ್ಲದೇ ಈ ವಿಚಾರವಾಗಿ ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೀನಿ. ಹೈಕಮಾಂಡ್ ಯಾವ ನಿರ್ದಾರ ತೆಗೆದುಕೊಳ್ಳುತ್ತೋ ನೋಡೋಣ ಎಂದರು.