ಮಂತ್ರಿ ಪದವಿಗೆ ಲಾಬಿ ನಡೆಸುವುದಿಲ್ಲ : ಯೋಗೇಶ್ವರ್
ಬೆಂಗಳೂರು : ನನಗೆ ಮುಖ್ಯಮಂತ್ರಿಗಳ ವಿರುದ್ಧವಾಗಲಿ, ರಾಜ್ಯ ಬಿಜೆಪಿ ನಾಯಕರ ವಿರುದ್ಧವಾಗಲಿ, ಹೈಕಮಾಂಡ್ ವಿರುದ್ಧ ಯಾವುದೇ ಅಸಮಾಧಾನವಿಲ್ಲ.
ಹಾಗೆ ಮಂತ್ರಿ ಪದವಿಗಾಗಿ ಯಾವುದೇ ಲಾಬಿ ನಡೆಸುವುದಿಲ್ಲ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.
ಬೊಮ್ಮಾಯಿ ಸಂಪುಟದಲ್ಲಿ ಸಿ ಪಿ ಯೋಗೇಶ್ವರ್ ಗೆ ಸಚಿವಸ್ಥಾನ ಸಿಕ್ಕಿಲ್ಲ. ಹೀಗಾಗಿ ಸಿಪಿವೈ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಯೋಗೇಶ್ವರ್ ಕೂಡ ದೆಹಲಿ ದಂಡಯಾತ್ರೆ ನಡೆಸಿ ವರಿಷ್ಠರ ಪ್ರದಕ್ಷಣೆ ಹಾಕಿದ್ದರು. ಇವತ್ತು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದು, ಕೆಲ ಕಾಲ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ನೂತನ ಮುಖ್ಯಮಂತ್ರಿಗಳು ಸಚಿವ ಸಂಪುಟ ರಚನೆ ಮಾಡಿದ ನಂತರ ಎರಡು ಮೂರು ಸಾರಿ ಭೇಟಿ ಮಾಡಿದ್ದೇನೆ.
ಮಾಧ್ಯಮಗಳ ಮುಂದೆ ಬಹಿರಂಗವಾಗಿರಲಿಲ್ಲ, ಇವತ್ತು ಕೂಡ ಭೇಟಿಯಾಗಿದ್ದೇನೆ. ಈ ಭೇಟಿಯಲ್ಲೇನು ವಿಶೇಷವಿಲ್ಲ ಎಂದು ಸ್ಪಷ್ಟಪಡಿಸಿದರು.
ಜೊತೆಗೆ ನನಗೆ ಮುಖ್ಯಮಂತ್ರಿಗಳ ವಿರುದ್ಧವಾಗಲಿ, ರಾಜ್ಯ ಬಿಜೆಪಿ ನಾಯಕರ ವಿರುದ್ಧವಾಗಲಿ, ಹೈಕಮಾಂಡ್ ವಿರುದ್ಧ ಯಾವುದೇ ಅಸಮಾಧಾನವಿಲ್ಲ.
ನಾನು ಸಾಮಾನ್ಯ ಕಾರ್ಯಕರ್ತನಾಗಿಯೇ ಪಕ್ಷ ಸಂಘಟನೆ ಮಾಡಿಕೊಂಡು ಹೋಗುತ್ತೇನೆ ಎಂದು ತಿಳಿಸಿ, ಮಂತ್ರಿ ಪದವಿಗೆ ಲಾಬಿ ನಡೆಸುವುದಿಲ್ಲ, ಇದಕ್ಕಿಂತ ಹೆಚ್ಚಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.









