ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದವರ ಭಾವಚಿತ್ರ ಮತ್ತು ವಿಳಾಸವುಳ್ಳ ಬ್ಯಾನರ್ ಗಳನ್ನು ರಸ್ತೆಗಳಲ್ಲಿ ಕಟ್ಟಿ ನಷ್ಟಭರಿಸುವಂತೆ ಸೂಚನೆ ನೀಡಿತ್ತು.
ಇದೀಗ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರಕಾರಕ್ಕೆ ಸಿಎಎ ವಿರೋಧಿ ಹೋರಾಟಗಾರರ ಭಾವಚಿತ್ರವಿರುವ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಸೋಮವಾರ ಆದೇಶ ನೀಡಿದೆ.
ಸಿಎಎ ವಿರೋಧಿ ಹೋರಾಟಗಾರರ ಭಾವಚಿತ್ರವಿರುವ ಬ್ಯಾನರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಂಡ, ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾಯಮೂರ್ತಿ ರಮೇಶ್ ಸಿನ್ಹಾ ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ಕ್ರಮವನ್ನು ಜನರ ಖಾಸಗಿ ಬದುಕಿನಲ್ಲಿ ಅನಗತ್ಯ ಮಧ್ಯಪ್ರವೇಶ ಎಂದು ವ್ಯಾಖ್ಯಾನಿಸಿತು.
ಮಾರ್ಚ್ 16ರ ಒಳಗೆ ಎಲ್ಲ ಬ್ಯಾನರ್ ಗಳನ್ನು ತೆರವುಗೊಳಿಸಬೇಕು ಎಂದು ಲಖನೌ ಜಿಲ್ಲಾಡಳಿತಕ್ಕೆ ಆದೇಶ ನೀಡಿದ ಕೋರ್ಟ್ ಇಂತಹ ಬ್ಯಾನರ್ ಗಳು ಸಂವಿಧಾನ ಆಶಯವನ್ನೇ ಉಲ್ಲಂಘಿಸುತ್ತವೆ. ಎಲ್ಲಾ ನಾಗರಿಕರನ್ನು ಸಮಾನವಾಗಿ ಕಾಣಬೇಕಿದ್ದ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದ್ದ ಸರ್ಕಾರ ಹಾಗೆ ನಡೆಸಿಕೊಂಡಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿತು.
ವಿಶ್ವಸಂಸ್ಥೆಯು ಖಾಸಗಿತನವನ್ನು ಎಲ್ಲ ಮನುಷ್ಯರ ಮೂಲಭೂತ ಹಕ್ಕು ಎಂದು ಗುರುತಿಸಿದೆ. ನಮ್ಮ ಸಂವಿಧಾನವು ಈ ಬಗ್ಗೆ ನೇರವಾಗಿ ಏನನ್ನೂ ಹೇಳಿಲ್ಲವಾದರೂ, ಸಂವಿಧಾನದ 21ನೇ ವಿಧಿಯ ಆಶಯವನ್ನು ನ್ಯಾಯಾಲಯಗಳು ಖಾಸಗಿತನದ ಪರವಾಗಿ ವ್ಯಾಖ್ಯಾನಿಸಿವೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವ ಯಾವುದೇ ಮೌಲ್ಯದ ಬಗ್ಗೆ ಅಗೌರವ ತೋರುವುದನ್ನು ಸಹಿಸಲಾಗುವುದಿಲ್ಲ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿತು.
ಪ್ರತಿಭಟನಕಾರರ ಭಾವಚಿತ್ರ ಹಾಗೂ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ಅತಿರೇಕದ ಪರಮಾವಧಿ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಕ್ರಮ ಎಂದು ಅಭಿಪ್ರಾಯ ಪಟ್ಟಿತು.








