ಸಿಎಎ ಹಾಗೂ ಎನ್ ಪಿಆರ್ ವಿರೋಧಿಸಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಇದೀಗ ಈಶಾನ್ಯ ರಾಜ್ಯ ಮೇಘಾಲಯಕ್ಕೂ ವ್ಯಾಪಿಸಿದೆ. ಇಲ್ಲಿನ ಶಿಲ್ಲಾಂಗ್‍ನಲ್ಲಿ ನಡೆದ ಸಂಘರ್ಷದಲ್ಲಿ 10 ಮಂದಿಗೆ ಚಾಕುವಿನಿಂದ ಇರಿಯಲಾಗಿದೆ. ಹೀಗೆ ಚಾಕುವಿನ ಇರಿತಕ್ಕೆ ಒಳಗಾದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ನಡೆದ ಹಿಂಸಾಚಾರ 42 ಮಂದಿ ಸಾವಿಗೆ ಕಾರಣವಾಗಿದೆ. ಹಾಗೇ ದೆಹಲಿ ಹಿಂಸಾಚಾರ ಮಾಸುವ ಮುನ್ನವೇ ಮೇಘಾಲದ ಶಿಲ್ಲಾಂಗ್‍ನಲ್ಲಿ ಹಿಂಸಾಚಾರ ಬುಗಿಲೆದ್ದಿದೆ. ಶನಿವಾರದ ಶಿಲ್ಲಾಂಗ್ ನಲ್ಲಿ ನಡೆಯುತ್ತಿದ್ದ ಸಿಎಎ ಪರ-ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ನಗರದಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಶಿಲ್ಲಾಂಗ್‍ನ ಜಯಾವ್, ಲಾಂಗ್‍ಸ್ನಿಂಗ್ ಮತ್ತು ಚಿರಾಪುಂಚಿ ಪಟ್ಟಣದ ಐವ್ ಸೊಹ್ರಾ ಮಾರುಕಟ್ಟೆಗಳಲ್ಲಿ ಘರ್ಷಣೆ ನಡೆದಿದೆ. ಇನ್ನು ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಂತಿರುವ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಇಚಮತಿ ಪ್ರದೇಶದಲ್ಲಿ ಖಾಸಿ ವಿದ್ಯಾರ್ಥಿ ಸಂಘಟನೆ ಸದಸ್ಯರು ಮತ್ತು ಸ್ಥಳೀಯರಲ್ಲದವರ ನಡುವೆ ಘರ್ಷಣೆ ಉಂಟಾಗಿ ಟ್ಯಾಕ್ಸಿ ಚಾಲಕನೊರ್ವ ಹತ್ಯೆಯಾಗಿದ್ದಾನೆ. ಅಲ್ಲದೆ ಹಿಂಸಾಚಾರದಲ್ಲಿ 10 ಮಂದಿಗೆ ಚಾಕುವಿನಿಂದ ಇರಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಗಲಭೆ ಪೀಡಿತ ಶಿಲ್ಲಾಂಗ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಫ್ರ್ಯೂ ಘೋಷಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಈಗಾಗಲೇ ಮೇಘಾಲಯಕ್ಕೆ ಆಗಮಿಸಿದ್ದು, ಇನ್ನೂ ಆರು ತುಕಡಿಗಳು ಬರಲಿವೆ ಎಂದು ಹೇಳಲಾಗಿದೆ. ಘಟನೆ ಸಂಬಂಧ 8 ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಈ ನಡುವೇ ಮೇಘಾಲಯ ಮುಖ್ಯಮಂತ್ರಿ ಸಂಗ್ಮಾ ರಾಜ್ಯದ ಜನರ ಉದ್ದೇಶಿಸಿ ಮಾತನಾಡಿ, ಜನರು ಹಿಂಸಾಚಾರದಿಂದ ದೂರವಿರಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಎಚ್ಚರಿಕೆ ನೀಡಿದ್ದಾರೆ.








