ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಅವರು ಕಳೆದ 40 ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಲೇವಡಿ ಮಾಡಿದ ಅವರು, ಹೈಕಮಾಂಡ್ ನಾಯಕರ ಅನುಪಸ್ಥಿತಿಯಿಂದಾಗಿ ರಾಜ್ಯದಲ್ಲಿ ಸಚಿವ ಸಂಪುಟವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. ತಮ್ಮ ಈ ವೈಫಲ್ಯವನ್ನು ಮುಚ್ಚಿಹಾಕಲು ಕಾಂಗ್ರೆಸ್ ನಾಯಕರು ಏನೇನೋ ಮಾತನಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋಶಿ ಅವರು, ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದು 40 ದಿನಗಳಾದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಲು ಸಾಧ್ಯವಾಗಿಲ್ಲ. ಅವರು ಇಂದಿಗೂ ರಾಹುಲ್ ಗಾಂಧಿಯವರಿಗಾಗಿ ಕಾಯುತ್ತಿದ್ದಾರೆ, ಆದರೆ ರಾಹುಲ್ ಗಾಂಧಿ ಎಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಮುಖ್ಯಮಂತ್ರಿಗಳು ಇನ್ನು ಕೂಡ ತಾವು ಅಧಿಕಾರಕ್ಕೆ ಬಂದ ಸಂಭ್ರಮದಲ್ಲೇ ತೇಲುತ್ತಿದ್ದಾರೆ ಹೊರತು, ಆಡಳಿತದ ಕಡೆಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಸಚಿವ ಸಂಪುಟ ವಿಸ್ತರಿಸಲಾಗದೆ ಕೇವಲ ವಿಮಾನಗಳಲ್ಲಿ ಕುಳಿತು ಭಾಷಣ ಬಿಗಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹೊಸ ರಾಜ್ಯಾಧ್ಯಕ್ಷರ ಭಾಷೆಯ ಬಗ್ಗೆ ಆಕ್ರೋಶ
ಕಾಂಗ್ರೆಸ್ ಪಕ್ಷದ ಹೊಸ ರಾಜ್ಯಾಧ್ಯಕ್ಷರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬ ಅರಿವೇ ಇಲ್ಲ ಎಂದು ಜೋಶಿ ತರಾಟೆಗೆ ತೆಗೆದುಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷರನ್ನು ಬೇಬಿ ಯಡಿಯೂರಪ್ಪ ಎಂದು ಕರೆಯುತ್ತಿರುವವರು ಮೊದಲು ತಮ್ಮನ್ನು ತಾವು ನೋಡಿಕೊಳ್ಳಲಿ. ಹಾಗಾದರೆ ಇವರು ನಕಲಿ ಬೇಬಿಗಳೇ ಅಥವಾ ಮರಿ ಬೇಬಿಗಳೇ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರಂತೆಯೇ ಬಾಲಿಶವಾಗಿ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವವರು ಹೇಗೆ ಮಾತನಾಡಬೇಕು ಎಂಬ ಕನಿಷ್ಠ ಜ್ಞಾನವೂ ಅವರಿಗಿಲ್ಲ. ಮುಖ್ಯಮಂತ್ರಿಗಳು ಮೊದಲು ತಮ್ಮ ಪಕ್ಷದವರಿಗೆ ಸಭ್ಯ ಭಾಷೆಯ ಪಾಠ ಮಾಡಲಿ ಎಂದು ಸಲಹೆ ನೀಡಿದರು.
ಆರ್ ಎಸ್ ಎಸ್ ಬಗ್ಗೆ ಟೀಕಿಸುವ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿಯಿಲ್ಲ. ರಾಜ್ಯದಲ್ಲಿ ಡ್ರಗ್ಸ್ ಪೆಡ್ಲರ್ ಗಳ ಸಂಖ್ಯೆ ಹೆಚ್ಚುತ್ತಿದೆ, ಸಣ್ಣ ಪುಟ್ಟ ವಿಚಾರಕ್ಕೆ ಜನರ ಕೈ ಕತ್ತರಿಸಲಾಗುತ್ತಿದೆ. ಇಂತಹ ಗಂಭೀರ ಸಮಸ್ಯೆಗಳು ಇವರ ಕಣ್ಣಿಗೆ ಬೀಳುತ್ತಿಲ್ಲ, ಬದಲಾಗಿ ಆರ್ ಎಸ್ ಎಸ್ ಮಾತ್ರ ಇವರಿಗೆ ಕಣ್ಣು ಕುಕ್ಕುತ್ತಿದೆ. ನಾವು ಆರ್ ಎಸ್ ಎಸ್ ನಿಂದ ಬಂದವರು ಎಂಬ ಹೆಮ್ಮೆಯಿದೆ, ಸಂಘಕ್ಕೆ ಅದರದ್ದೇ ಆದ ಶಕ್ತಿಯಿದ್ದು, ಸಕಾಲದಲ್ಲಿ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ಮಹದಾಯಿ ಯೋಜನೆಯ ಅಡೆತಡೆಗಳನ್ನು ನಿವಾರಿಸಿದ್ದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ. ಆಡಳಿತದಲ್ಲಿದ್ದಾಗ ಮಹದಾಯಿಯನ್ನು ವಿರೋಧಿಸಿದ್ದ ಕಾಂಗ್ರೆಸ್ ನಾಯಕರು ಈಗ ಸುಳ್ಳು ಹೇಳುತ್ತಿದ್ದಾರೆ ಎಂದು ಜೋಶಿ ಸ್ಪಷ್ಟಪಡಿಸಿದರು. ಇನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಎಲ್ಲರಿಗೂ ಉಚಿತ ಎಂದವರು ಈಗ ಸಮೀಕ್ಷೆ ಮಾಡುತ್ತಿರುವುದು ಯಾಕೆ? ಗ್ಯಾರಂಟಿಗಳನ್ನು ನಿಭಾಯಿಸಲು ಸಾಧ್ಯವಾಗದೆ ಈಗ ಒಂದೊಂದೇ ಷರತ್ತುಗಳನ್ನು ಹೇರುತ್ತಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದರೂ, ಅದನ್ನು ಸಾಗಣೆ ಮಾಡಲು ಹಣವಿಲ್ಲದಂತಹ ದುಸ್ಥಿತಿಗೆ ಈ ಸರ್ಕಾರ ತಲುಪಿದೆ ಎಂದು ಜೋಶಿ ಕಟುವಾಗಿ ಟೀಕಿಸಿದರು.







