ಠಾಕ್ರೆ ಕಪಾಳಕ್ಕೆ ಹೊಡೆಯೋದಾಗಿ ಹೇಳಿಕೆ ಕೊಟ್ಟಿದ್ದ ಕೇಂದ್ರ ಸಚಿವ ಬಂಧನ
ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಪಾಳಕ್ಕೆ ಹೊಡೆಯುವುದಾಗಿ ಹೇಳಿಕೆ ಕೊಟ್ಟಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಗಡದಲ್ಲಿ ಸೋಮವಾರ ಜನ್ ಆಶೀರ್ವಾದ್ ಯಾತ್ರೆಯಲ್ಲಿ ಮಾತನಾಡುತ್ತಾ ನಾರಾಯಣ್ ರಾಣೆ, ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು. ಅವರು ಎಷ್ಟನೇ ವರ್ಷದ ಸ್ವಾತಂತ್ರ್ಯ ಎಂದು ಕೇಳಲು ಹಿಂದೆ ಬಾಗಿದರು. ನಾನು ಅಲ್ಲಿರುತ್ತಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂಬ ಹೇಳಿಕೆ ನೀಡಿದ್ದರು.
ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು, ಶಿವಸೇನಾ ನಾಯಕರು, ಕಾರ್ಯಕರ್ತರು ನಾರಾಯಣ್ ರಾಣೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ನಾರಾಯಣ್ ರಾಣೆ ಅವರ ಈ ಹೇಳಿಕೆ ಬಿಜೆಪಿ-ಶಿವಸೇನಾ ಕಾರ್ಯಕರ್ತ ಮಾರಾಮಾರಿಗೆ ಕಾರಣವಾಗಿತ್ತು.
ನಾರಾಯಣ್ ರಾಣೆ ಅವರ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಶಿವಸೇನಾ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ಗಳನ್ನು ರದ್ದು ಮಾಡಿ ಬಂಧನದಿಂದ ರಕ್ಷಣೆ ಕೋರಿ ರಾಣೆ ಮಂಗಳವಾರ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರಾಣೆ ಅರ್ಜಿಯನ್ನು ತಳ್ಳಿ ಹಾಕಿದೆ. ಇದರ ಬೆನ್ನಲೆ ನಾರಾಯಣ್ ರಾಣೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.









