ಬೆಂಗಳೂರು: ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ಹಲವು ತಿಂಗಳಿನಿಂದ ಮುಂದಕ್ಕೆ ಹೋಗಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಕಸರತ್ತಿಗೆ ಈ ವಾರ ಚಾಲನೆ ಸಿಗುವ ಸಾಧ್ಯತೆ ಇದೆ.
ಕೊರೊನಾ ಬೆನ್ನಲ್ಲೇ ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೊರೊನಾ ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆ ಸೇರಿದ್ದು ಸಂಪುಟ ಪುನಾರಚನೆಯ ಪ್ರಕ್ರಿಯೆಗಳಿಗೆ ಮತ್ತೆ ಹಿನ್ನೆಡೆಯಾಗಿತ್ತು.
ಸೋಮವಾರದ ನಂತರ ದೆಹಲಿಗೆ ತೆರಳಿ ಅತಿವೃಷ್ಟಿಯಿಂದ ಆದ ಹಾನಿಗೆ ರಾಜ್ಯಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದರು.
ಇಂದು (ಸೋಮವಾರ) ಸಂಜೆ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರು ಸಚಿವರ ಸಭೆ ಕರೆದಿದ್ದಾರೆ. ಸಭೆಯ ನಂತರ ಮುಖ್ಯಮಂತ್ರಿಗಳು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಒಂದು ವೇಳೆ ಸಂಪುಟ ಪುನಾರಚನೆಯಾದರೆ ಮೂರ್ನಾಲ್ಕು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸಚಿವರ ವಿಶ್ವಾಸ ಗಳಿಸಲು ಈ ಸಭೆ ಕರೆದಿದ್ದಾರೆ ಎನ್ನಲಾಗಿದೆ.
ಮುಂದಿನ ವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಕೊರೊನಾ, ಡ್ರಗ್ಸ್ ದಂಧೆ ಹಾಗೂ ಡಿ.ಜೆ ಹಳ್ಳಿ ಗಲಭೆ, ಕೊರೊನ ಉಪಕರಣ ಖರೀದಿ ಅಕ್ರಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಕೈಗೊಳ್ಳಬೇಕಾದ ಪ್ಲಾನ್ ಬಗ್ಗೆಯೂ ಸಚಿವರ ಜತೆ ಸಮಾಲೊಚನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.