ಮಂಡ್ಯ: ಇದೇ ಜುಲೈ 29ರ ಗುರುವಾರ ಮಂಡ್ಯ ನಗರ ಬಂದ್‍ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಮಂಡ್ಯದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಕೆಆರ್‍ಎಸ್ ಉಳಿಸಿ ಜನಾಂದೋಲನ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಭೆಯಲ್ಲಿ ಎಲ್ಲಾ ಸಂಘಟನೆಗಳು ಜುಲೈ 29ರಂದು ಮಂಡ್ಯ ನಗರ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿವೆ. ಜಿಲ್ಲೆಯಲ್ಲಿ ಅದರಲ್ಲೂ ಕೆಆರ್‍ಎಸ್ ಸುತ್ತಮುತ್ತ ಹಾಗೂ ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆಯಿಂದ ಕನ್ನಂಬಾಡಿ ಅಣೆಕಟ್ಟೆಗೆ ಧಕ್ಕೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ನೀಡಿದೆ.
ಆದರೂ, ಸರ್ಕಾರ ಮತ್ತು ಜಿಲ್ಲಾಡಳಿತ ಗಣಿ ಮಾಲೀಕರ ಪ್ರಭಾವಕ್ಕೆ ಮಣಿದು ಗಣಿಗಾರಿಕೆಗೆ ಅನುಮತಿ ನೀಡುತ್ತಲೇ ಬಂದಿವೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಕಲ್ಲು ಗಣಿಗಾರಿಕೆಗೆ ನಿಷೇಧಿತ ಸ್ಫೋಟಕಗಳು ಹಾಗೂ ಮೆಗ್ಗರ್ ಬ್ಲಾಸ್ಟ್ ನಿಂದ ಬಂಡೆಗಳನ್ನು ಸಿಡಿಸುತ್ತಿರುವುದು ಕನ್ನಂಬಾಡಿ ಅಣೆಕಟ್ಟೆಯ ಅವನತಿಗೆ ಕಾರಣವಾಗಿದೆ. ಕನ್ನಡಿಗರ ಜೀವನಾಡಿ ಕನ್ನಂಬಾಡಿ ಅಣೆಕಟ್ಟೆಗೆ ಧಕ್ಕೆಯಾದರೆ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರಿಗೆ ದೊಡ್ಡ ಜಲ ಗಂಡಾಂತರ ಎದುರಾಗಲಿದೆ.
ಹಾಗಾಗಿ, ಕೆಆರ್‍ಎಸ್ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಕಲ್ಲು ಗಣಿಗಾರಿಕೆಯನ್ನ ಸಂಪೂರ್ಣವಾಗಿ ನಿಷೇಧಿಸಬೇಕು. ಆ ಮೂಲಕ ಕನ್ನಡಿಗರ ಜೀವನಾಡಿ ಕನ್ನಂಬಾಡಿ ಅಣೆಕಟ್ಟೆ ಉಳಿಸಬೇಕು ಎಂದು ಒತ್ತಾಯಿಸಿ ಮಂಡ್ಯ ಬಂದ್ ಕರೆ ನೀಡಲಾಗಿದೆ.
ಅಂದು ಮಂಡ್ಯ ನಗರವನ್ನ ಸಂಪೂರ್ಣ ಬಂದ್ ಮಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಾಂಪ್ರದಾಯಿಕವಾಗಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.