ಬೆಂಗಳೂರು: ರಾಜ್ಯದ ಹಿತರಕ್ಷಣೆಯ ವಿಚಾರದಲ್ಲಿ ರಾಜಕೀಯ ಎಳೆದು ತರಬಾರದು. ಬಿಜೆಪಿ ಸಂಸದರು ದೆಹಲಿಯಲ್ಲಿ ಬಾಯಿ ಬಿಡುತ್ತಿಲ್ಲ. ಸರ್ವಪಕ್ಷಗಳ ನಿಯೋಗವನ್ನಾದರೂ ಕರೆದುಕೊಂಡು ಹೋಗಿ. ನಾವೇ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುತ್ತೇವೆ. ಇದರಲ್ಲಿ ರಾಜಕೀಯ ಬೇಡ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ತಿವಿದಿದ್ದಾರೆ.

ಸರಣಿ ಟ್ವೀಟ್‍ಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದವರು. ಅವರಿಗೆ ರಾಜ್ಯದ ಹಿತ ಬೇಕಿಲ್ಲವೇ? ಯಡಿಯೂರಪ್ಪ ಅವರೇ ನೀವ್ಯಾಕೆ ಇದನ್ನೆಲ್ಲ ಸಹಿಸಿಕೊಂಡು ಕೂತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕತೆ ಅಧೋಗತಿ ತಲುಪಿದೆ ಎನ್ನುವುದನ್ನು ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ. ಆರ್‍ಬಿಐ ಗವರ್ನರ್ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರ ವರೆಗೆ ದೇಶದ ಪ್ರಖ್ಯಾತ ಆರ್ಥಿಕ ತಜ್ಞರೆಲ್ಲರೂ ದೇಶದ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದಾರೆ.
2020-2021ರ ಆರ್ಥಿಕ ವರ್ಷದ ಅಂತ್ಯಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್‍ಟಿ ಪರಿಹಾರವಾಗಿ ರೂ.30,000 ಕೋಟಿ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಅನ್ಯಾಯವನ್ನು ಪ್ರತಿಭಟಿಸಲಿಕ್ಕಾಗದ ಮುಖ್ಯಮಂತ್ರಿಗಳು ಜಿಎಸ್ ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್‍ಬಿಐ ನಿಂದ ಸಾಲ ಪಡೆಯಲು ಹೊರಟು ರಾಜ್ಯವನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ವಿತ್ತೀಯ ಕೊರತೆ ನಮ್ಮ ಆಂತರಿಕ ಉತ್ಪನ್ನದ ಶೇ.3ರನ್ನು ಮೀರಬಾರದು ಎಂದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಹೇಳಿದೆ. ಬಿಜೆಪಿ ಸರ್ಕಾರ ಈ ಮಿತಿಯನ್ನು ಶೇಕಡಾ 5ಕ್ಕೆ ಹೆಚ್ಚಿಸಲು ಹೊರಟಿರುವುದು ರಾಜ್ಯದ ಆರ್ಥಿಕತೆಗೆ ಮಾರಣಾಂತಿಕ ಹೊಡೆತ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.








