ಬೆಂಗಳೂರು : ಭೂ ಸುಧಾರಣಾ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಶುಕ್ರವಾರ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಲು ಮುಂದಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಂದ್ ಗೆ ರೈತ ಸಂಘಟನೆಗಳು ಮಾತ್ರವಲ್ಲದೆ ನಾರಾಯಣಗೌಡ ನೇತೃತ್ವದ ಕರವೇ, ಕರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಓಲಾ-ಉಬರ್, ಆಟೋ, ಟ್ಯಾಕ್ಸಿ ಸಂಘಟನೆಗಳು ಸೇರಿದಂತೆ 32ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಬೆಂಬಲ ಘೋಷಿಸಲಿವೆ.
ಅಲ್ಲದೆ ಅಂದು ಬೆಂಗಳೂರು ನಗರಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಮತ್ತು ಹೆದ್ದಾರಿಗಳು ಬಂದ್ ಆಗುವ ಸಾಧ್ಯತೆಗಳಿವೆ.
ಇತ್ತ ಎಪಿಎಂಸಿ, ವಿದ್ಯುತ್, ಭೂ ಸುಧಾರಣಾ ಕಾಯ್ದೆ ಸುಗ್ರಿವಾಜ್ಞಾ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ಎರಡನೆ ದಿನಕ್ಕೆ ಕಾಲಿಟ್ಟಿದೆ.
ಮಳೆ, ಗಾಳಿ, ಕೊರೊನಾಗೆ ಹೆದರದೇ ರೈತರು ನಗರದ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.
ಇಂದು ಸಂಜೆ ಮತ್ತೊಮ್ಮೆ ಸಭೆ ನಡೆಸಿ ಬಂದ್ ರೂಪುರೇಷೆ ಬಗ್ಗೆ ರೈತ ಮುಖಂಡರು ಮಾತುಕತೆ ನಡೆಸಲಿದ್ದಾರೆ.