ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಕ್ಯಾಂಪ್ಕೋ ಸಂಸ್ಥೆ ಮುಂದಿನ ವಾರದಿಂದ ಅಡಿಕೆ ಖರೀದಿ ನಡೆಸಲು ಸಿದ್ಧತೆ ನಡೆಸಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ತಿಳಿಸಿದ್ದಾರೆ.
ಲಾಕ್ ಡೌನ್ ಜನರ ಹಿತದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ತೆಗೆದುಕೊಂಡಿರುವ ನಿರ್ಧಾರವಾಗಿದ್ದು, ಇಂತಹ ಸಮಯದಲ್ಲಿ ಅಗತ್ಯಸೇವೆ ಹೊರತು ಪಡಿಸಿ ಇತರ ಎಲ್ಲಾ ವ್ಯವಹಾರಗಳು ಬಂದ್ ಆಗಿತ್ತು. ಬೆಳೆಗಾರರ ಹಿತದೃಷ್ಟಿಯಿಂದ ಕ್ಯಾಂಪ್ಕೋ ಸಂಸ್ಥೆ ಸರಕಾರದ ಜೊತೆ ಉನ್ನತ ಮಟ್ಟದ ಮಾತುಕತೆ ನಡೆಸಿ ಏಪ್ರಿಲ್ 15ರ ನಂತರ ಅಡಿಕೆ ಖರೀದಿಗೆ ತೀರ್ಮಾನಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ, ನಿರ್ದೇಶಕ ಚಣಿಲ ತಿಮ್ಮಪ್ಪ ಶೆಟ್ಟಿ, ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ, ಸಾಜ ರಾಧಾಕೃಷ್ಣ ಆಳ್ವ ಅವರು ಸಭೆ ನಡೆಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು ಕಾನೂನಿನ ಚೌಕಟ್ಟಿನ ಒಳಗೆ ಖರೀದಿ ನಡೆಯಲಿದ್ದು, ಏಪ್ರಿಲ್ 15ರ ನಂತರ ಪ್ರತಿ ಸದಸ್ಯ ಅಡಿಕೆ ಬೆಳೆಗಾರರ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗದಂತೆ ತಿಂಗಳಿಗೆ 25,000 ಬೆಲೆಯ ಅಥವಾ 1ಕ್ವಿಂಟಾಲ್ ಅಡಿಕೆ ಖರೀದಿ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಈ ಸಂದರ್ಭದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಲಾಕ್ ಡೌನ್ ಕಳೆದು ಎಲ್ಲಾ ಸರಿಯಾದ ನಂತರ ಒಮ್ಮೆಲೇ ಉತ್ಪಾದನೆಗೆ ಒತ್ತಡ ಹೆಚ್ಚಿ ಮತ್ತೆ ಅಡಿಕೆಗೆ ಬೇಡಿಕೆ ಬರಲಿದೆ, ಆದುದರಿಂದ ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ ಎಂದು ಎಸ್.ಆರ್.ಸತೀಶ್ಚಂದ್ರ ಹೇಳಿದರು.