ಜಿನೀವಾ, ಮೇ 17 : ಸೋಂಕು ನಿವಾರಕವನ್ನು ಸಿಂಪಡಿಸುವುದರಿಂದ ಕೊರೊನಾ ವೈರಸ್ ನಾಶವಾಗಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಕೊರೋನಾ ವೈರಸ್ ನಾಶಪಡಿಸಲೆಂದು ಸ್ವಚ್ಛ ಮಾಡುವ ಸಂದರ್ಭದಲ್ಲಿ ಸೋಂಕು ನಿವಾರಕವನ್ನು ಸಿಂಪಡಣೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಅದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದೆ.
ಬೀದಿಗಳಲ್ಲಿ ಅಥವಾ ಮಾರುಕಟ್ಟೆಯಂತಹ ಹೊರಾಂಗಣ ಪ್ರದೇಶಗಳಲ್ಲಿ ಯಾವುದೇ ರೋಗಾಣುಗಳನ್ನು ನಾಶಪಡಿಸಲು ಸೋಂಕು ನಿವಾರಕಗಳ ಸಿಂಪಡಣೆಯನ್ನು ಶಿಫಾರಸು ಮಾಡುವುದಿಲ್ಲ. ಏಕೆಂದರೆ ಅಲ್ಲಿರುವ ಕೊಳಕು ಹಾಗೂ ಇತರೆ ಅವಶೇಷಗಳನ್ನು ಸೋಂಕು ನಿವಾರಕ ನಿಷ್ಕ್ರಿಯಗೊಳ್ಳುವಂತೆ ಮಾಡುತ್ತವೆ.
ಪಾದಾಚಾರಿ ದಾರಿಗಳು ಮತ್ತು ಬೀದಿಗಳು ಸೋಂಕಿನ ಮೂಲಗಳು ಅಲ್ಲವಾಗಿರುವ ಕಾರಣ ಸೋಂಕುನಿವಾರಕಗಳನ್ನು ಅಂತಹ ಜಾಗದಲ್ಲಿ ಸಿಂಪಡಣೆ ಮಾಡಿದರೆ, ಅದು ಮಾನವನ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ತಿಳಿಸಿದೆ. ಸೋಂಕು ನಿವಾರಕವನ್ನು ವ್ಯಕ್ತಿಯ ಮೇಲೆ ಸಿಂಪಡಿಸುವುದರಿಂದ ಅದು ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಹಾನಿಯುಂಟು ಮಾಡಬಹುದು. ಅಲ್ಲದೆ ಸೋಂಕು ನಿವಾರಕವು ಸೋಂಕಿತ ವ್ಯಕ್ತಿಯ ಸಂಪರ್ಕದ ಮೂಲಕ ವೈರಸ್ ಹರಡುವ ಸಾಮರ್ಥ್ಯವನ್ನು ಕಡಿಮೆಗೊಳಿಸುವುದಿಲ್ಲ. ಹಾಗಾಗಿ ವ್ಯಕ್ತಿಗಳ ಮೇಲೆ ಸೋಂಕು ನಿವಾರಕಗಳ ಸಿಂಪಡಣೆಯನ್ನು ಶಿಫಾರಸು ಮಾಡುವುದಿಲ್ಲ ಎಂದು ಹೇಳಿದೆ.
ಯಾವುದೇ ವಿಷಕಾರಿ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಅದು ಜನರಿಗೆ ಚರ್ಮದ ತೊಂದರೆ, ಬ್ರಾಂಕೋಸ್ಪಾಸ್ಮ್, ಕಣ್ಣು ಹಾಗೂ ಜಠರ-ಕರುಳಿನ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಲೇಬೇಕೆಂದರೆ, ಸೋಂಕು ನಿವಾರಕದಲ್ಲಿ ನೆನೆಸಿಟ್ಟ ಬಟ್ಟೆಯಿಂದ ಆ ಪ್ರದೇಶವನ್ನು ಸ್ವಚ್ಛಗೊಳಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.