ಬೆಂಗಳೂರು : ಬಿಜೆಪಿ ರಾಜ್ಯದಲ್ಲಿ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಎರಡನೇ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಿದ್ದು, ಐದು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ಶುರುವಾಗಿದೆ.
ಉತ್ತರ ಕನ್ನಡ, ಬೆಳಗಾವಿ, ರಾಯಚೂರು, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ. ಈ ಕ್ಷೇತ್ರಗಳಿಗೆ ಬಿಜೆಪಿ ಸಂಸದರಿದ್ದು, ಬಹುತೇಕರಿಗೆ ಈ ಬಾರಿ ಟಿಕೆಟ್ ಕೈತಪ್ಪುವುದು ಭೀತಿ ಶುರುವಾಗಿದೆ.
ಆದರೆ, ಯಾರಿಗೆ ಟಿಕೆಟ್ ಸಿಕ್ಕರೂ ಪ್ರತಿರೋಧ ಸೃಷ್ಟಿಯಾಗದಂತೆ ನಿಯಂತ್ರಿಸುವ ಕಾರ್ಯದ ಕುರಿತು ಹೈಕಮಾಂಡ್ ಚರ್ಚಿಸಿದೆ. ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಮಾಲೋಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ರಾಜ್ಯದಲ್ಲಿ ಈಗಾಗಲ 20 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದ್ದು, ಬಿಜೆಪಿ ಪಾಲಿನ ಬಾಕಿ ಕ್ಷೇತ್ರಗಳಿಗೆ ಪಟ್ಟಿ ಶುಕ್ರವಾರ ಬಿಡುಗಡೆಯಾಗಲಿದೆ. 5 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಯಾವುದೇ ಗೊಂದಲವಿಲ್ಲ. ಸದ್ಯ ಈ 5 ಕ್ಷೇತ್ರಗಳಿಗೆ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಭೀತಿ ಕೂಡ ಶುರುವಾಗಿದೆ. ಉತ್ತರ ಕನ್ನಡ – ಅನಂತ ಕುಮಾರ ಹೆಗಡೆ, ಬೆಳಗಾವಿ – ಮಂಗಳಾ ಅಂಗಡಿ, ರಾಯಚೂರು – ರಾಜಾ ಅಮರೇಶ್ವರ್ ನಾಯಕ್, ಚಿಕ್ಕಬಳ್ಳಾಪುರ – ಸಿಎನ್ ಬಚ್ಚೇಗೌಡ, ಚಿತ್ರದುರ್ಗ – ಎ ನಾರಾಯಣಸ್ವಾಮಿ ಟಿಕೆಟ್ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೇ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅಲ್ಲದ, 3 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಹೀಗಾಗಿ ಇನ್ನೂ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡುವುದಿದೆ.








