ಕಲಬುರಗಿ: ಗರ್ಭಿಣಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆರಿಗೆಗೆಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ 7 ಮಂದಿ ಮೃತಪಟ್ಟಿರುವ ಭೀಕರ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಹೊರವಲಯದ ಅಳಂದ ರಸ್ತೆಯ ಸಾವಳಗಿ ಬಳಿ ಈ ಭೀಕರ ಅಪಘಾತ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಗರ್ಭಿಣಿ ಇರ್ಫಾನಾ ಬೇಗಂ(25), ರುಚಿಯಾ ಬೇಗಂ(50), ಅಬೇದಾಬಿ ಬೇಗಂ(50), ಮುನೀರ್(28), ಮಹಮ್ಮದ್ ಅಲಿ(38), ಶೌಕತ್ ಅಲಿ(29), ಜಯಚುನಬಿ(60) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಕಲಬುರಗಿ ಜಿಲ್ಲೆ ಅಳಂದ ನಿವಾಸಿಗಳು.
ಅಪಘಾತದ ತೀವ್ರತೆಗೆ ಲಾರಿ ಕೂಡ ಪಲ್ಟಿಯಾಗಿದೆ. ಅಪಘಾತಕ್ಕೀಡಾದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.