Carlos Alcaraz ಕಾರ್ಲೊಸ್ ಆಲ್ಕಾರಾಜ್… ಟೆನಿಸ್ eಗತ್ತಿನ ಯುವ ತಾರೆ. ಕಳೆದ 20-22 ವರ್ಷಗಳಲ್ಲಿ Roger Federer ರೋಜರ್ ಫೆಡರರ್, ರಫೆಲ್ ನಡಾಲ್, ನೊವಾಕ್ ಜಾಕೊವಿಕ್ 20ಕ್ಕೂ ಅಧಿಕ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದುಕೊಂಡಾಗ ಕಾರ್ಲೋಸ್ ಇನ್ನು ಕೂಡ ವೃತ್ತಿಪರ ಟೆನಿಸ್ ಅಂಗಳಕ್ಕೆ ಕಾಲಿಟ್ಟಿಲ್ಲ.
ಈಗಾಗಲೇ ರೋಜರ್ ಫೆqರರ್ ಟೆನಿಸ್ ಅಂಗಣದಿಂದ ದೂರ ಸರಿದಿದ್ದಾರೆ. ರಫೆಲ್ ನಡಾಲ್ ಗಾಯದಿಂದ ಟೆನಿಸ್ ಬದುಕು ಬಹುತೇಕ ಮುಗಿದುಹೋಗಿದೆ. ನೊವಾಕ್ ಜಾಕೊವಿಕ್ ಅನುಭವಿ ಆಟಗಾರನಾಗಿರುವುದರಿಂದ ಸದ್ಯಕ್ಕೆ ಚಾಲ್ತಿಯಲ್ಲಿರುವ ನೆಚ್ಚಿನ ಆಟಗಾರ. ಸುಮಾರು ಎರಡು ದಶಕಗಳಿಂದ ಟೆನಿಸ್ ಜಗತ್ತನ್ನು ಆಳುತ್ತಿರುವ ಈ ತ್ರಿಮೂರ್ತಿಗಳ ಬಳಿಕ ಮುಂದಿನ ಅಧಿಪತಿ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಹಾಗಂತ ಕಾರ್ಲೊಸ್ ರಾತ್ರೋ ರಾತ್ರಿ ಸುದ್ದಿಯಾದ ಆಟಗಾರನಲ್ಲ. 2018ರಲ್ಲಿ ವೃತ್ತಿಪರ ಟೆನಿಸ್ ಜಗತ್ತಿಗೆ ಎಂಟ್ರಿಯಾಗಿದ್ರೂ ಸದ್ದು ಮಾಡಿದ್ದು 2022ರಲ್ಲಿ. ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮೂರನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ರೂ ಭವಿಷ್ಯದ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ರು. ಅಷ್ಟೇ ಅಲ್ಲ, 2022ರ ಯುಎಸ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಟೆನಿಸ್ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಿದ್ರು. ತ್ರಿಮೂರ್ತಿಗಳಿಗೆ ಪರೋಕ್ಷವಾಗಿ ಎಚ್ಚರಿಕೆಯನ್ನು ಕೊಟ್ಟಿದ್ದ ಕಾರ್ಲೊಸ್, ಇಷ್ಟು ದಿನ ನೀವು ಟೆನಿಸ್ ಜಗತ್ತನ್ನು ಆಳಿದ್ದೀರಿ..ಮುಂದೆ ನಾನು ಬರ್ತಾ ಇದ್ದೇನೆ… ದಾರಿ ಬಿಡಿ ಎಂಬ ದಾಟಿಯಲ್ಲಿ ಕಾರ್ಲೊಸ್ ಆಟದ ಮೂಲಕವೇ ಎಚ್ಚರಿಸಿದ್ರು.
ಇದೀಗ ಅದು ನಿಜವಾಗುತ್ತಿದೆ. ಪ್ರತಿಷ್ಠಿತ 2023ರ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಮೂಲಕ ಟೆನಿಸ್ ಜಗತ್ತಿನ ಸುಲ್ತಾನನಾಗುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಅದರಲ್ಲೂ ಫೈನಲ್ನಲ್ಲಿ ನೊವಾಕ್ ಜಾಕೊವಿಕ್ ಅವರನ್ನು ಸೋಲಿಸಿದಾಗ ಹಲವರು ಹುಬ್ಬೇರಿಸಿದ್ರು. ಆದ್ರೆ ಟೆನಿಸ್ ಪಂಡಿತರು ಅಚ್ಚರಿಪಡಲಿಲ್ಲ. ಬದಲಾಗಿ ವಿಶ್ವ ಟೆನಿಸ್ಗೆ ನೂತನ ಚಾಂಪಿಯನ್ ಆಟಗಾರನ ಉದಯವಾಗಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ. ಅದರಲ್ಲೂ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಕಾರ್ಲೊಸ್ ಆಟಕ್ಕೆ ಫಿದಾ ಆಗಿದ್ದಾರೆ. ಜೊತೆಗೆ ತನ್ನ ಆಪ್ತ ಸ್ನೇಹಿತ ರೋಜರ್ ಫೆಡರರ್ಗೆ ಕಾರ್ಲೊಸ್ ಅವರನ್ನು ಹೋಲಿಕೆ ಮಾಡಿದ್ದಾರೆ.
ಫೈನಲ್ನಲ್ಲಿ ಕಾರ್ಲೊಸ್ ಅವರ ತಾಳ್ಮೆಯ ಆಟಕ್ಕೆ ಟೆನಿಸ್ ಅಭಿಮಾನಿಗಳು ಮನ ಸೋತಿದ್ದಾರೆ. 1-6, 7-6(6), 6-1, 3-6, 6-4ರಿಂದ ದಾಖಲೆಯ ಗ್ರ್ಯಾಂಡ್ ಸ್ಲ್ಯಾಂ ಗೆಲ್ಲುವ ಕನಸು ಕಾಣುತ್ತಿದ್ದ ನೊವಾಕ್ ಜಾಕೊವಿಕ್ ಅವರನ್ನು ಚಕಿತಗೊಳಿಸಿದ್ರು. ಬದ್ಧತೆ, ತಾಳ್ಮೆ, ಆಕ್ರಮಣಕಾರಿ ಆಟದ ಮುಂದೆ ಜಾಕೊವಿಕ್ ಅವರ ಅನುಭವ, ಕೌಶಲ್ಯದ ಆಟ ಲೆಕ್ಕಕ್ಕೆ ಬರಲಿಲ್ಲ.
ಒಟ್ಟಿನಲ್ಲಿ ಸ್ಪೇನ್ನ ಕಾರ್ಲೊಸ್ ಆಲ್ಕಾರಾಜ್ ಟೆನಿಸ್ ಜಗತ್ತಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. 20ರ ಹರೆಯದಲ್ಲಿ ಎರಡು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿರೋ ಕಾರ್ಲೊಸ್ ಮುಂದಿನ ದಿನಗಳಲ್ಲಿ ತ್ರಿಮೂರ್ತಿಗಳ ದಾಖಲೆಯನ್ನು ಅಳಿಸಿ ಹಾಕುತ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಕಾರ್ಲೊಸ್ ಅವರನ್ನು ಈಗಲೇ ಫೆಡರರ್, ನಡಾಲ್, ಜಾಕೊವಿಕ್ ಸಾಧನೆಗೆ ಹೋಲಿಸುವುದು ಕೂಡ ಅಷ್ಟೊಂದು ಸಮಂಜಸವಲ್ಲ. ಯಾವುದಕ್ಕೂ ಕಾದು ನೋಡೋಣ..!