ಮುಂಬೈ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿಯ ಸಂಸ್ಥಾಪಕ ಹಾಗೂ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಹಲವು ಕಡೆ ಕಾಂಗ್ರೆಸ್ ನಾಯಕರು ಪೊಲೀಸ್ ದೂರುಗಳ ಸುರಿಮಳೆ ಗೈದಿದ್ದಾರೆ.
ಪಲ್ಘಾರ್ ಗುಂಪು ಹತ್ಯೆ ಪ್ರಕರಣವನ್ನು ಸೋನಿಯಾ ಗಾಂಧಿಗೆ ತಳುಕು ಹಾಕಿ, ಅವರ ವಿರುದ್ಧ ತಮ್ಮ ಮಾಧ್ಯಮದಲ್ಲಿ ಅವಹೇಳನಕಾರಿ ಭಾಷೆಯನ್ನು ಉಪಯೋಗಿಸಿ, ಉದ್ದೇಶಪೂರ್ವಕವಾಗಿಯೇ ದ್ವೇಷಪೂರಿತ ಮಾತುಗಳನ್ನು ಆಡಿದ್ದಾರೆ ಎಂದು ಕೈ ನಾಯಕರು ಆರೋಪಿಸಿದ್ದಾರೆ. ಅಲ್ಲದೆ ಛತ್ತೀಸ್ ಗಢದ ಕಾಂಗ್ರೆಸ್ ನಾಯಕರು ರಾಯ್ ಪುರ್ ದಲ್ಲಿ ಅರ್ನಬ್ ವಿರುದ್ಧ ದೂರು ದಾಖಲಿಸಿದ್ದು, ಎಫ್ ಐಆರ್ ದಾಖಲು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲೂ ಸಹ ಅರ್ನಬ್ ವಿರುದ್ಧ ಹಲವು ದೂರುಗಳು ದಾಖಲಾಗಿವೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸತ್ಯಜೀತ್ ತಾಂಬೆ ಕೂಡ ಅರ್ನಬ್ ವಿರುದ್ಧ ದೂರು ನೀಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರಕರಣ ದಾಖಲಿಸುವಂತೆ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮಹಾರಾಷ್ಟ್ರದ ಇಂಧನ ಸಚಿವ ನಿತಿನ್ ರಾವತ್ ಪುತ್ರ ಕುನಾಲ್ ಸಹ ನಾಗಪುರದಲ್ಲಿ ದೂರು ನೀಡಿದ್ದಾರೆ.
ಇದಲ್ಲದೆ ಮಹಾರಾಷ್ಟ್ರದ ಗೃಹ ಸಚಿವರು ಕೂಡ ಅರ್ನಬ್ ಗೋಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಲ್ಘಾರ್ ಗುಂಪು ಹತ್ಯೆ ಪ್ರಕರಣದಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ಹಾಗೂ ಸೋನಿಯಾ ಗಾಂಧಿ ಅವರನ್ನು ಅವಹೇಳನ ಮಾಡಿದ್ದಕ್ಕೆ ಕಾನೂನು ಕ್ರಮ ಜರುಗಿಸುವುದಾಗಿ ವಾರ್ನಿಂಗ್ ನೀಡಿದ್ದಾರೆ.
ಹೀಗೆ ವಿವಿಧೆಡೆ ಅರ್ನಬ್ ವಿರುದ್ಧ ದೂರು ದಾಖಲಾಗಿದ್ದು, ಇದರ ನಡುವೆ ಅರ್ನಬ್ ಕೂಡ ತನ್ನ ಹಾಗೂ ಪತ್ನಿ ಮೇಲೆ ದಾಳಿ ಯತ್ನ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅರ್ನಬ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಹೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.